ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ವಾರ್ತಾ ಭವನದಲ್ಲಿ ಸೋಮವಾರ ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘದ ವತಿಯಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ನೀಡುವ ನೈಜ ಸುದ್ದಿಗಳೇ ನಮ್ಮಂತಹ ಜನಪ್ರತಿನಿಧಿಗಳನ್ನು ಅಭಿವೃದ್ಧಿ ಕೆಲಸಗಳತ್ತ ತೆಗೆದುಕೊಂಡು ಹೋಗುತ್ತವೆ. ಪತ್ರಕರ್ತರು ಅನೇಕ ಸವಾಲುಗಳ ನಡುವೆಯೂ ತಮ್ಮ ವೃತ್ತಿಯನ್ನು ನಿಭಾಯಿಸುತ್ತಿದ್ದಾರೆ. ಆದರೆ, ಕಾಲಕ್ಕೆ ತಕ್ಕಂತೆ ತಾವು ಬದಲಾಗಬೇಕು. ಬರಹಗಳು ಕೇವಲ ಸುದ್ದಿ ಆಗಬಾರದು. ಸಮಾಜದ ಬೆಳವಣಿಗೆಗೆ ದಿಕ್ಕು ತೋರಿಸುವ ಶಕ್ತಿಯಾಗಬೇಕು ಎಂದು ಹೇಳಿದರು.
ಡಿಸಿಪಿ ನಾರಾಯಣ ಭರಮನಿ ಮಾತನಾಡಿ, ಪತ್ರಕರ್ತರು ಮತ್ತು ಪೊಲೀಸರು ಸಮಾಜದ ಸತ್ಯವನ್ನು ಜನರ ಮುಂದೆ ತರುವ ಕೆಲಸ ಮಾಡುತ್ತಾರೆ. ಬೆಳಗಾವಿಯ ಪತ್ರಕರ್ತರು ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಹಾರೈಸಿದರು.ಬೆಳಗಾವಿ ಮುದ್ರಣ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಮಾತನಾಡಿ, ಉತ್ತರ ಕರ್ನಾಟಕದ ಸಮಾಜಮುಖಿ ಪತ್ರಿಕೋದ್ಯಮ ಸರಕಾರದ ಕಿವಿಗೆ ತಲುಪಬೇಕಿದೆ. ಮೇಲಾಗಿ ಉತ್ತರ ಕರ್ನಾಟಕದ ಪತ್ರಕರ್ತರ ಬವಣೆಯನ್ನು ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಈ ಭಾಗದ ಜನಪ್ರತಿನಿಧಿಗಳು ಮಾಡಬೇಕು ಎಂದರು,
ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕಾಂತ ಸುಗಂಧಿ ಮಾತನಾಡಿ, ಉತ್ತರ ಕರ್ನಾಟಕದ ಪತ್ರಕರ್ತರು ಹಿಂಜರಿಯದೇ ಸರಕಾರಿ ಪ್ರಶಸ್ತಿಗಳಿಗೆ ಅರ್ಜಿ ಹಾಕಬೇಕು. ಯುವ ಪತ್ರಕರ್ತರು ಹೆಚ್ಚಾಗಿ ಓದಬೇಕು. ಓದಿನ ಮೂಲಕವೇ ಬರವಣಿಗೆಯ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರು ಹೃಷಿಕೇಶ್ ದೇಸಾಯಿ, ಕಾನೂನು ಸಲಹೆಗಾರ ರವೀಂದ್ರ ತೋಟಿಗೇರ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನೌಶಾದ್ ಬಿಜಾಪುರ, ಸಹ ಕಾರ್ಯದರ್ಶಿ ಸುರೇಶ್ ನೇರ್ಲ್ಕರ್, ಸಂಜಯ ಸೂರ್ಯವಂಶಿ, ಮಂಜುನಾಥ ಕೋಳಿಗುಡ್ಡ, ಮಲ್ಲಿಕಾರ್ಜುನ ಬಾಳಗೌಡರ, ಅಶೋಕ ಮುದ್ದಣ್ಣವರ, ಸುನೀಲ ಪಾಟೀಲ, ಪ್ರಶಾಂತ ಮಲಗಾಂವಿ, ಸಿದ್ಧನಗೌಡ ಪಾಟೀಲ, ಪ್ರಮೋದ ಗಡಕರ, ಪರಶುರಾಮ ಮುಕನವರ ಉಪಸ್ಥಿತರಿದ್ದರು.