ಕನ್ನಡಪ್ರಭ ವಾರ್ತೆ ಹಂಪಿ (ವಿರೂಪಾಕ್ಷೇಶ್ವರ ವೇದಿಕೆ)
ಯುವ ಕವಿಗಳಿಗೆ ಪರಂಪರೆ ಬಗ್ಗೆ ಮಾಹಿತಿ ಇರಬೇಕು ಎಂದು ಹಂಪಿ ಕನ್ನಡ ವಿವಿಯ ವಿಮರ್ಶಕ ಹಾಗೂ ಕವಿ ಡಾ. ವೆಂಕಟಗಿರಿ ದಳವಾಯಿ ತಿಳಿಸಿದ್ದಾರೆ.ಹಂಪಿ ಉತ್ಸವ -2025 ರ ಅಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಯುವ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಒಳದೃಷ್ಟಿ ಕಾಪಾಡಿಕೊಳ್ಳದಿದ್ದರೆ ಕಾವ್ಯ ಬಹಳ ದಿನ ಉಳಿಯುವುದಿಲ್ಲ. ಯುವ ಕವಿಗಳು ಅವಸರ ಮಾಡಬಾರದು. ಓದನ್ನು ವಿಸ್ತಾರ ಮಾಡಿಕೊಳ್ಳಬೇಕಿದೆ ಪರಿವರ್ತನೆ ಎಂಬುದು ನನ್ನೊಳಗೆ ಪ್ರಾರಂಭವಾಗಬೇಕು ಎಂದರು.ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ಕೇವಲ ಭಕ್ತಿಯೊಂದೆ ಹರಿದಾಡಿಲ್ಲ, ಕಾವ್ಯವು ಹರಿದಾಡಿದೆ. ಕಾವ್ಯ ಎಂದರೆ ದೇವರಲ್ಲ, ಕಾವ್ಯ ಎಂದರೆ ಮನುಷ್ಯ ಎಂದ ಅವರು, ಯುವ ಕವಿಗಳು ಗೆದ್ದವರ ಬಗ್ಗೆ ಇರದೆ ಸೊತವರ ಬಗ್ಗೆ ಗಮನ ಹರಿಸಿ ಎಂದು ಹೇಳಿದರು.
ಕನ್ನಡ ಕಾವ್ಯದ ಸ್ವರೂಪವನ್ನು ಬೇರೆ ದಿಕ್ಕಿನತ್ತ ತೆಗೆದುಕೊಂಡು ಹೋಗಬೇಕು, ನಿಮ್ಮೊಳಗಿನ ದಂಗೆಯ ವಿರುದ್ಧ ಏಳಬೇಕು ಆ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಬೇಕು ಎಂದು ಕಾವ್ಯಗಳ ಸೂಕ್ಷ್ಮತೆಯನ್ನು ಯುವ ಕವಿಗಳಿಗೆ ತಿಳಿಸಿದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಕಷ್ಟ ಇದ್ದಾಗ, ನಿಸರ್ಗದ ಜೊತೆ ಬೆಳೆದಾಗ ಕವನ ಹುಟ್ಟಿಕೊಳ್ಳುತ್ತದೆ. ಕಲಾಸಕ್ತರಿಗೆ ಜಿಲ್ಲಾಡಳಿತ ಸದಾ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು. ಟೀಕೆ, ಟಿಪ್ಪಣೆ ಬರುತ್ತವೆ ಅವುಗಳನ್ನು ಮೀರಿ ಬೆಳೆಯಬೇಕು ಎಂದು ಯುವಕವಿಗಳಿಗೆ ಕಿವಿಮಾತು ಹೇಳಿದರು.
ಕವಿ ಡಾ. ಅಕ್ಕಿ ಬಸವೇಶ ಆಶಯ ನುಡಿದು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪರಂಪರೆಯಾಗಿ ಮುಂದುವರೆದಿದೆ ಕಾವ್ಯ. ಹರಿಹರೇಶ್ವರ, ಅಲ್ಲಮಪ್ರಭುರವರು ಕವಿಗಿರಬೇಕಾದ ಆದ್ಯತೆ ಎತ್ತಿ ಹಿಡಿದಿದ್ದಾರೆ. ಪಂಪರವರು ಸಹ ಕವಿ ಧೋರಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಪ್ರಾಚೀನ ಕಾಲದ ಕವಿಗಳ ಪರಿಚಯದೊಂದಿಗೆ ಕವಿಗಳಿಗೆ ಸಾವಿಲ್ಲ ಎನ್ನುವುದನ್ನು ವಿವರಿಸಿದರು.ಈ ಸಂದರ್ಭ ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್, ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ, ಬಾಣದ ಮುರುಳೀಧರ, ಅಬ್ದುಲ್ ಹೈಯದ್ ಉಪಸ್ಥಿತರಿದ್ದರು. ಕಿಷ್ಕಿಂದ ವಿವಿಯ ಡೀನ್ ಡಾ. ಎಸ್. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.