ಯೋಗವನ್ನು ಎಲ್ಲರೂ ಅಳವಡಿಸಿಕೊಳ್ಳೋಣ: ಬಸವಲಿಂಗ ಮಹಾಸ್ವಾಮೀಜಿ

KannadaprabhaNewsNetwork |  
Published : Jul 18, 2024, 01:35 AM IST
ಹೊಸಪೇಟೆಯಲ್ಲಿ ಬುಧವಾರ ಯೋಗ ತರಬೇತಿ ಶಿಬಿರಕ್ಕೆ ಕೊಟ್ಟೂರು ಸಂಸ್ಥಾನಮಠದ ಜ. ಶ್ರೀ ಬಸವಲಿಂಗ ಮಹಾಸ್ವಾಮೀಜಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಪತಂಜಲಿ ಮಹರ್ಷಿಗಳು ತೋರಿಸಿಕೊಟ್ಟ ಅಷ್ಟಾಂಗ ಯೋಗ ಒಂದು ಅದ್ಭುತ ಪರಿಕಲ್ಪನೆ. ಆಸನದ ಮೂಲಕ ದೇಹ, ವ್ಯಾಕರಣದ ಮೂಲಕ ಭಾಷೆ, ಆಯುರ್ವೇದದ ಮೂಲಕ ಆರೋಗ್ಯವನ್ನು ಸುಧಾರಿಸುವ ದಾರಿಯನ್ನು ಪತಂಜಲಿ ತೋರಿದರು ಎಂದು ಕೊಟ್ಟೂರು ಸಂಸ್ಥಾನಮಠದ ಜ. ಶ್ರೀ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.

ಹೊಸಪೇಟೆ: ಯೋಗ ಎಂಬುದು ದೇಹ ಮತ್ತು ಮನಸ್ಸಿನ ಸದೃಢತೆಗೆ ಹಾಗೂ ಶುದ್ಧಿಗೆ ಇರುವ ಅನುಷ್ಠಾನ. ಇದು ಹಿಂದೂಗಳಿಗೆ ಮಾತ್ರ ಸೀಮಿತ ಎಂಬ ಭ್ರಮೆ ಬೇಡ. ಇದನ್ನು ಇಡೀ ಮನುಷ್ಯ ಸಮಾಜ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸ್ಥಳೀಯ ಕೊಟ್ಟೂರು ಸಂಸ್ಥಾನಮಠದ ಜ. ಶ್ರೀ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.

ಪತಂಜಲಿ ಯೋಗ ಸಮಿತಿ ವತಿಯಿಂದ ಮಠದ ಆವರಣದಲ್ಲಿ 25 ದಿನ ನಡೆಯುವ ಸಹಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಯೋಗ ಹಿಂದೂಗಳಿಗಷ್ಟೇ ಎಂದು ಭಾವಿಸಿದ್ದಕ್ಕಾಗಿಯೇ ಪ್ರಾಚೀನ ಕಾಲದ ಈ ಮಹಾನ್‌ ವಿದ್ಯೆ ಜಗತ್ತಿನೆಲ್ಲೆಡೆ ಪಸರಿಸದೆ ಸೀಮಿತ ವ್ಯಾಪ್ತಿಯಲ್ಲಿತ್ತು. ಬಾಬಾ ರಾಮ್‌ದೇವ್ ಗುರೂಜಿ ಅವರ ಪ್ರಯತ್ನದಿಂದ ಈಗ ಯೋಗವನ್ನು ಬಹುತೇಕ ಮಂದಿ ಸ್ವೀಕರಿಸುವ ಹಂತಕ್ಕೆ ಬಂದಿದೆ. ಬಹಳಷ್ಟು ಮುಸ್ಲಿಂ ರಾಷ್ಟ್ರಗಳು ಇಂದು ಒಪ್ಪಿಕೊಳ್ಳಲಾರಂಭಿಸಿವೆ. ಇದು ಇನ್ನಷ್ಟು ಜನಮಾನಸದಲ್ಲಿ ನೆಲೆಗೊಳ್ಳುವಂತಾಗಬೇಕು ಎಂದರು.

ಪತಂಜಲಿ ಮಹರ್ಷಿಗಳು ತೋರಿಸಿಕೊಟ್ಟ ಅಷ್ಟಾಂಗ ಯೋಗ ಒಂದು ಅದ್ಭುತ ಪರಿಕಲ್ಪನೆ. ಆಸನದ ಮೂಲಕ ದೇಹ, ವ್ಯಾಕರಣದ ಮೂಲಕ ಭಾಷೆ, ಆಯುರ್ವೇದದ ಮೂಲಕ ಆರೋಗ್ಯವನ್ನು ಸುಧಾರಿಸುವ ದಾರಿಯನ್ನು ಪತಂಜಲಿ ತೋರಿದರು. ನಮ್ಮ ದೇಹ ಒಂದು ವಾಹನ ಇದ್ದಂತೆ, ವಾಹನವನ್ನು ಬಳಸದೆ ಮೂಲೆಯಲ್ಲಿ ಇಟ್ಟರೆ ಅದು ಕೆಟ್ಟು ಹೋಗುತ್ತದೆ, ಅದೇ ರೀತಿ ನಾವು ಪ್ರತಿದಿನ ದೇಹದಂಡನೆ ಮಾಡಿದರೆ ಮಾತ್ರ ಆರೋಗ್ಯವಂತರಾಗಿ ಉಳಿಯಲು ಸಾಧ್ಯ ಎಂದು ಶ್ರೀಗಳು ನುಡಿದರು.

ಯೋಗ ನಮ್ಮನ್ನು ತಪ್ಪುದಾರಿಗೆ ಹೋಗದಂತೆ ತಡೆಯುತ್ತದೆ. ದೃಢವಾದ ನಿರ್ಧಾರ ಕೈಗೊಳ್ಳುವುದಕ್ಕೆ ನೆರವಾಗುತ್ತದೆ. ನಾವು ಆಚಾರ, ವಿಚಾರಕ್ಕೆ ಮಹತ್ವ ಕೊಟ್ಟಾಗ ನಮ್ಮ ಜೀವನಕ್ರಮವೂ ಉತ್ತಮವಾಗಿರುತ್ತದೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನಮ್ಮಲ್ಲಿರುವ ಹಲವು ಕೆಡುಕುಗಳು ದೂರವಾಗಲು ಸಾಧ್ಯ ಎಂದರು.

ಯೋಗ ಶಿಕ್ಷಕ ಹಾಗೂ ಪತಂಜಲಿ ಯೋಗ ಸಮಿತಿಯ ರಾಜ್ಯ ಸಮಿತಿ ಸದಸ್ಯ ಮತ್ತು ಗದಗ ಹಾಗೂ ವಿಜಯನಗರ ಜಿಲ್ಲೆಗಳ ಉಸ್ತುವಾರಿ ಡಾ.ಎಸ್‌.ಬಿ. ಹಂದ್ರಾಳ ಅವರು ಮೊದಲ ದಿನದ ಯೋಗ ಮಾರ್ಗದರ್ಶನ ನೀಡಿ ಪತಂಜಲಿ ಮಹರ್ಷಿಗಳು 196 ಯೋಗ ಸೂತ್ರಗಳನ್ನು ನೀಡಿದ್ದಾರೆ. ಅದರಲ್ಲಿ ಕೆಲವೊಂದನ್ನಾದರೂ ತಿಳಿಯುವ ಪ್ರಯತ್ನ ನಮ್ಮಿಂದಾಗಬೇಕು ಎಂದರು.

ಪತಂಜಲಿ ಯೋಗ ಸಮಿತಿ ಯುವ ಭಾರತ ರಾಜ್ಯ ಪ್ರಭಾರಿ ಕಿರಣ್‌ ಕುಮಾರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಯೋಗ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಡಾ. ಎಫ್‌.ಟಿ. ಹಳ್ಳಿಕೇರಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ರಾಜೇಶ್ ಕಾರ್ವಾ, ಯುವ ಭಾರತ ಜಿಲ್ಲಾ ಪ್ರಭಾರಿ ವೀರೇಶ್, ಹಿರಿಯ ಯೋಗ ಸಾಧಕ ಬಾಲಚಂದ್ರ ಶರ್ಮಾ, ಕೃಷ್ಣ ನಾಯಕ, ಮಂಗಳಕ್ಕ, ಅನಂತ ಜೋಶಿ, ಅಶೋಕ ಚಿತ್ರಗಾರ, ಶ್ರೀನಿವಾಸ, ಶ್ರೀರಾಮ, ಪ್ರಮೀಳಮ್ಮ ಹಾಗೂ ನಿರಂತರ ಕೇಂದ್ರಗಳ ಸಂಚಾಲಕರು ಪಾಲ್ಗೊಂಡಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''