ಹಾನಗಲ್ಲ: ಕನ್ನಡ ಕನ್ನಡಿಗರ ಹಿತದಲ್ಲಿ ಕನ್ನಡ ಪರ ಸಂಘಟನೆಗಳು ಅತ್ಯಂತ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವುದರಿಂದ ಕನ್ನಡದ ಹಿತ ಕಾಪಾಡಲು ಸಾಧ್ಯವಾಗಿದ್ದು, ಇದು ಕನ್ನಡದ ಶಕ್ತಿ, ಕನ್ನಡದ ಹೆಮ್ಮೆ, ಈ ಕಾರ್ಯಕ್ಕೆ ಎಲ್ಲರೂ ಶಕ್ತಿ ಮೀರಿ ಕೈಜೋಡಿಸೋಣ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೆಗೌಡರ ತಿಳಿಸಿದರು. ಹಾನಗಲ್ಲಿನ ಮಹಾತ್ಮಾಗಾಂಧಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಯುವ ಸೇನೆ ತಾಲೂಕು ಘಟಕ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಮ್ಮ ಹೆಮ್ಮೆಯ ಭಾಷೆ. ಕನ್ನಡ ಉಳಿದರೆ ನಾವು ಉಳಿಯುತ್ತೇವೆ. ಕನ್ನಡ ನಮ್ಮ ಶಕ್ತಿಯೂ ಹೌದು. ಕರ್ನಾಟಕ ಅತ್ಯಂತ ಸಮೃದ್ಧ ಸಾಂಸ್ಕೃತಿಕ ನಾಡಾಗಿದ್ದು ನಮ್ಮ ಹೆಮ್ಮೆ. ಕನ್ನಡದ ಅಳಿವು ಉಳಿವಿನಲ್ಲಿ ಕನ್ನಡಾಭಿಮಾನವೇ ಮುಖ್ಯ. ಎಲ್ಲ ಕನ್ನಡಿಗರು ಸ್ವಾಭಿಮಾನಿ ಕನ್ನಡಿಗರಾಬೇಕು. ಕನ್ನಡದ ಹಿತಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ. ಕನ್ನಡದ ಸೇವೆ ಎಂದರೆ ಅದು ನಮ್ಮ ತಾಯಿ ನೆಲದ ಸೇವೆಯೇ ಅಗಿದೆ. ಕನ್ನಡ ನಮ್ಮ ಸ್ವಾಭಿಮಾನ ನಮ್ಮ ಸಂಪತ್ತು ಎಂದರು.ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮು ತಳವಾರ ಮಾತನಾಡಿ, ಈ ನಾಡಿನ ಜೀವಸಲೆಯಾಗಿ ಕನ್ನಡ ಭಾಷೆ ನಮ್ಮನ್ನು ಬೆಸೆದುಕೊಂಡಿದೆ. ಎಲ್ಲಿಯೂ ಕನ್ನಡಕ್ಕೆ ಧಕ್ಕೆ ಬರದ ರೀತಿಯಲ್ಲಿ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾದುದು. ಕನ್ನಡ ನಾಡು ಸಾಂಸ್ಕೃತಿಕವಾಗಿಯೂ ಸಮೃದ್ಧ ನಾಡಾಗಿದ್ದು ಕನ್ನಡತನವನ್ನು ಮೈಗೂಡಿಸಿಕೊಂಡು ಹೆಮ್ಮೆಯಿಂದ ಬದುಕೋಣ. ಕನ್ನಡಿಗರೆಲ್ಲ ಒಟ್ಟಾಗಿ ಬದುಕುವ ಸಂಕಲ್ಪ ಮಾಡೋಣ ಎಂದರು.ತಾಲೂಕು ಘಟಕದ ಅಧ್ಯಕ್ಷ ಉಮೇಶ ಮುದಿಗೌಡ್ರ, ಜಿಲ್ಲಾ ಉಪಾಧ್ಯಕ್ಷ ಅರಬಾಜ್ ಇನಾಂದಾರ್, ಮಹಿಳಾ ಘಟಕದ ಉಪಾಧ್ಯಕ್ಷೆ ಪ್ರೇಮಾ ಮುದಿಗೌಡ್ರ, ಪದಾಧಿಕಾರಿಗಳಾದ ಎಂ.ಕೆ. ತಿಮ್ಮಾಪೂರ, ಸುಮಾ ಪುರದ, ಗೌರಮ್ಮ ಕುಲಕರ್ಣಿ, ಮಂಜುನಾಥ ದಾನಪ್ಪನವರ, ನಾಗರಾಜ ಯರಬಾಳ, ಲೋಹಿತಾಶ್ವರ ಓಲೇಕಾರ, ಬಸವಣೆಯ್ಯ ಬಸಾಪೂರ, ಕುಮಾರ ಚಿಕ್ಕಣ್ಣನವರ, ಮಾಲತೇಶ ವಾಳಗದ, ಸಚೀನ್ ಸಾಳುಂಕೆ, ಬಸವರಾಜ ಬಸಾಪುರ, ನಾಗರಾಜ ಚಿಕ್ಕಣ್ಣನವರ, ಎಸ್.ಎಸ್. ಭರಮಣ್ಣನವರ, ಉಮೇಶ ಆರೆಗೊಪ್ಪ, ವಿರೂಪಾಕ್ಷಪ್ಪ ಮೂಡೂರ, ಕಾವೇರಿ ಬಳ್ಳಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.