ಹೊಸಪೇಟೆ: ಆತ್ಮನಿರ್ಭರ ಭಾರತ ಸಂಕಲ್ಪ ಯಶಸ್ವಿ ಆಗಬೇಕಾದರೆ 2047ಕ್ಕೆ ಸದೃಢ, ಸ್ವಾವಲಂಬಿ ಭಾರತ ಆಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ ಹೇಳಿದರು.
ಈ ಹಿಂದೆ ದೇಶದಲ್ಲಿ ಕೊರೋನಾ ಸೋಂಕು ಹರಡಿದ ಚೀನಾದಿಂದಲೇ ಕೊರೋನಾ ಕಿಟ್ ಗಳು ಹಾಗೂ ಮಾಸ್ಕ್ ಗಳನ್ನು ಖರೀದಿಸುವಂತಹ ಪರಿಸ್ಥಿತಿ ಇತ್ತು. ಆದರೆ ಆತ್ಮನಿರ್ಭರ ಸಂಕಲ್ಪ ಅಭಿಯಾನದ ಭಾಗವಾಗಿ ನಮ್ಮ ದೇಶದಲ್ಲಿಯೇ ಕೊರೋನಾಕ್ಕೆ ಲಸಿಕೆ ಕಂಡು ಹಿಡಿಯಲಾಗಿತ್ತು. ಪಿಪಿ ಕಿಟ್ ಗಳನ್ನು ತಯಾರಿಸಿ, ವಿದೇಶಗಳಿಗೆ ಕೊರೋನಾ ಸಂದರ್ಭದಲ್ಲಿ ವಿತರಿಸಲಾಯಿತು ಎಂದರು.
ಈ ಹಿಂದೆ ನಮ್ಮ ದೇಶಕ್ಕೆ ರಕ್ಷಣಾ ಸಾಮಗ್ರಿಗಳನ್ನು ವಿದೇಶದಿಂದಲೇ ಖರೀದಿಸಬೇಕಾಗಿತ್ತು. ಆದರೆ ಆತ್ಮನಿರ್ಭರದ ಭಾಗವಾಗಿ ನಮ್ಮ ದೇಶದಲ್ಲಿಯೇ ತಯಾರಿಸಲಾದ ಸಾಮಗ್ರಿಗಳನ್ನು ಇಂದು ಬಳಸುವ ಮೂಲಕ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. 2047ಕ್ಕೆ ಸಂಪೂರ್ಣ ಅಭಿವೃದ್ದಿ ಹೊಂದಿದ ದೇಶ ಭಾರತ ಆಗಬೇಕು. ಅದಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದರು.ಬಿಜೆಪಿ ಮಾಜಿ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ನಮ್ಮ ಕುಟುಂಬ ಸ್ಥಳೀಯ ಸ್ವದೇಶಿ ವಸ್ತುಗಳನ್ನು ಬಳಸಿಕೊಂಡು ಸದೃಢವಾದರೆ ಭಾರತ ಸದೃಢವಾದಂತೆ. 10-15 ವರ್ಷಗಳ ಹಿಂದೆ ನಾವು ಪ್ರತಿಯೊಂದಕ್ಕೂ ಬೇರೆ ದೇಶದ ವಸ್ತುಗಳ ಮೇಲೆ ಅವಲಂಬಿತ ಆಗಿದ್ದೆವು. ಆದರೆ ಈಗ ಮೇಕ್ ಇನ್ ಇಂಡಿಯಾದ ಫಲವಾಗಿ ರಕ್ಷಣಾ ಸಾಮಗ್ರಿಗಳು ಸೇರಿದಂತೆ ಬಹುತೇಕ ವಸ್ತುಗಳು ದೇಶದಲ್ಲಿಯೇ ಉತ್ಪನ್ನ ಆಗುತ್ತಿದೆ. ಶೇ.90ರಷ್ಟು ಆಮದು ಪ್ರಮಾಣ ಕಡಿಮೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಕಾರ 2047ಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ಆಗುವ ಹಿನ್ನೆಲೆಯಲ್ಲಿ ಭಾರತ ವಿಶ್ವಗುರು ಆಗಬೇಕು. ಆ ನಿಟ್ಟಿನಲ್ಲಿ ನಾವಿಂದು ಪರಾವಲಂಬಿಗಳಾಗದೇ ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಮೂಲಕ ಆತ್ಮನಿರ್ಭರ ಭಾರತ ಆಭಿಯಾನ ಯಶಸ್ವಗೊಳಿಸಬೇಕಾಗಿದೆ ಎಂದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಆರುಂಡಿ ಸುವರ್ಣ ಮಾತನಾಡಿ, ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ನಾವು ಸ್ವದೇಶಿ ವಸ್ತುಗಳನ್ನು ಬಳಸಬೇಕು. ಇದರಿಂದ ಆರ್ಥಿಕತೆ ಹೆಚ್ಚಳವಾಗುವುದು ಅಲ್ಲದೆ. ದೇಶದ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದರು.ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆತ್ಮನಿರ್ಭರ ಭಾರತ ಸ್ವದೇಶಿ ಪ್ರತಿಜ್ಙಾವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಮುಖಂಡರಾದ ಅಶೋಕ ಜೀರೆ, ಕಾಲೇಜಿನ ಪ್ರಚಾರ್ಯರಾದ ಪೂಜಾ, ಜಗದೀಶ್ ಸೇರಿದಂತೆ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಮುಖಂಡರು, ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಹೊಸಪೇಟೆಯ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ನಡೆಸಲಾಯಿತು.