ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕನ್ನಡಪ್ರಭ ವಾರ್ತೆ ಕನಕಗಿರಿ
ನಾಡಿನ ರಕ್ಷಣೆಗೆ ನಾವು ಬದ್ಧರಾಗಿದ್ದಾಗ ಮಾತ್ರ ಸಂಸ್ಕೃತಿ, ಪರಂಪರೆ, ನೆಲ-ಜಲ, ಭಾಷೆ ಉಳಿಯಲಿದೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.ಶುಕ್ರವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ೬೯ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಲೂರು ವೆಂಕಟರಾವ್ ಸೇರಿ ಅನೇಕ ಹೋರಾಟಗಾರರ ಏಕೀಕರಣ ಚಳವಳಿಯಿಂದಾಗಿ ಕನ್ನಡ ಉಳಿದು ಬೆಳೆದಿದೆ. ಕನ್ನಡ ನಾಡಿನಲ್ಲಿ ವಾಸಿಸುವ ಜನರು ಆಂಧ್ರ, ತಮಿಳು, ಮರಾಠಿ ಭಾಷೆಯನ್ನು ಉಪಯೋಗಿಸುತ್ತಿದ್ದರಿಂದ ಕನ್ನಡಕ್ಕೆ ಧಕ್ಕೆಯಾಗುತ್ತಿದೆ. ಈ ದಿಶೆಯಲ್ಲಿ ಕನ್ನಡದ ಉಳವಿಗೆ ಶ್ರಮಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನಾಡಿನ ನೆಲ-ಜಲ, ಭಾಷೆ, ಸಂಸ್ಕೃತಿ, ಪರಂಪರೆಯ ಉಳಿವಿಗೆ ಜಾಗತೀಕರಣದಲ್ಲಿ ರಾಜ್ಯದ ತುಂಬೆಲ್ಲಾ ಅನೇಕ ಹೋರಾಟಗಾರರು ಶ್ರಮಿಸುತ್ತಿದ್ದಾರೆ. ಅದರಂತೆ ನಾವೂ ನಮ್ಮ ಕನ್ನಡ ನಾಡಿನ ಸಂರಕ್ಷಣೆ ವಿಚಾರದಲ್ಲಿ ಕಂಕಣ ಬದ್ಧರಾಗಿ ಹೋರಾಡೋಣ ಎಂದು ತಿಳಿಸಿದರು.ನಂತರ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಅಮರೇಶ ದೇವರಾಳ ಮಾತನಾಡಿ, ಕನ್ನಡ ರಾಜ್ಯೋತ್ಸವ ನಾಡಿನ ಏಕತೆ ಹಾಗೂ ಅಸ್ಮಿತೆಯ ಹಬ್ಬವಾಗಿದೆ. ಕದಂಬ, ಹೊಯ್ಸಳ, ವಿಜಯನಗರ, ಚಾಲುಕ್ಯರ, ರಾಷ್ಟ್ರಕೂಟರು, ಮೈಸೂರು ಸೇರಿದಂತೆ ಹಲವು ಮನೆತನಗಳು ನಾಡಿನ ಕಲೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿವೆ. ಅದರಂತೆ ನಾವೂ ಕನ್ನಡದ ಉಳವಿಗೆ ಮುಂದಾಗೋಣ. ನೆಲ-ಜಲ ವಿಷಯದಲ್ಲಿ ಸ್ವಾಭಿಮಾನಿಗಳಾಗೋಣ ಎಂದರು.
ಧ್ವಜಾರೋಹಣ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಧ್ವಜ ವಂದನೆ ಸಲ್ಲಿಸಿದರು. ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಗೀತೆಗಳಿಗೆ ಶಾಲಾ ವಿದ್ಯಾರ್ಥಿಗಳಿಂದ ನಡೆದ ಸಾಮೂಹಿಕ ನೃತ್ಯ ಗಮನ ಸೆಳೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೃತ್ಯ ಪ್ರದರ್ಶಿಸಿದ ಶಾಲಾ ತಂಡಗಳಿಗೆ ತಾಲೂಕಾಡಳಿತ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.ಪಪಂ ಅಧ್ಯಕ್ಷೆ ಹುಸೇನಬಿ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ, ಗ್ರೇಡ್-೨ ತಹಸೀಲ್ದಾರ್ ವಿ.ಎಚ್. ಹೊರಪೇಟೆ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಟಿ. ರಾಜಶೇಖರ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಪಿಐ ಎಂ.ಡಿ. ಫೈಜುಲ್ಲಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ, ಶಿಕ್ಷಣ ಇಲಾಖೆಯ ಮಹೇಶ, ಪಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.