ಭೂ ದಾಖಲೆಗಳ ಅಭಿಲೇಖಾಲಯ ಗಣಕೀಕೃತ ಕಾರ್ಯಾಲಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹೊಸಪೇಟೆರೈತರ ಜಮೀನುಗಳ ದಾಖಲೆಗಳ ಸುರಕ್ಷತೆಗಾಗಿ ಭೂ ಸುರಕ್ಷಾ ಯೋಜನೆ ಅಡಿಯಲ್ಲಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇನ್ನು ಮುಂದೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗಿದ್ದು, ಇದು ಸರ್ಕಾರದ ರೈತಪರ ಕಾಳಜಿ ಎತ್ತಿ ತೋರಿಸುತ್ತದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ತಹಸೀಲ್ದಾರ್ ಕಾರ್ಯಾಲಯದಲ್ಲಿ ಭೂ ದಾಖಲೆಗಳ ಅಭಿಲೇಖಾಲಯ ಗಣಕೀಕೃತ ಕಾರ್ಯಾಲಯ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ತಹಸೀಲ್ದಾರ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬಾರದು. ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ವಿಜಯನಗರ ಕ್ಷೇತ್ರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಕ್ರಮವಹಿಸಬೇಕು ಎಂದರು.ವಿಜಯನಗರ ಕ್ಷೇತ್ರದಲ್ಲಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣಗಳು ಕಂಡುಬಂದರೆ ತಕ್ಷಣವೇ ಕ್ರಮವಹಿಸಬೇಕು. ಭೂ ಬ್ಯಾಂಕ್ ಹಾಗು ಸರ್ಕಾರಿ ಜಮೀನು ಗುರುತಿಸುವಿಕೆಯಲ್ಲಿ ಏನೇನೂ ಬೆಳವಣಿಗೆ ಆಗಿದೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಮಾಹಿತಿ ನೀಡಬೇಕು. ಮೊದಲು ನಾವು ಜನರ ಕೆಲಸ ಮಾಡಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ರಾಜ್ಯ ಸರ್ಕಾರ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಿದ ಲ್ಯಾಪ್ ಟಾಪ್ ವಿತರಣೆ ಮಾಡಿದರು. ಈ ಸಂದರ್ಭ ಹೊಸಪೇಟೆ, ಕಮಲಾಪುರ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಅಂಗವಿಕಲರಿಗೆ, ವೃದ್ಧರಿಗೆ ಮತ್ತು ವಿಧವೆಯರಿಗೆ ಮಾಸಾಶನ ಮಂಜೂರಾತಿ ಪತ್ರ ನೀಡಿದರು. ಇದೇ ಸಂದರ್ಭ ಮೃತ ಕುಟುಂಬದ ವಿಧವಾ ಮಹಿಳೆಯರಿಗೆ ಭದ್ರತಾ ಯೋಜನೆ ಅಡಿಯಲ್ಲಿ ತಲಾ ₹20 ಸಾವಿರದ ಮಂಜೂರಾತಿ ಪತ್ರ ನೀಡಿದರು.ತಹಸೀಲ್ದಾರ ಶೃತಿ, ಸಹಾಯಕ ಭೂ ದಾಖಲೆಗಳ ನಿರ್ದೇಶಕ ಸುರೇಶ, ಉಪ ನೋಂದಣಾಧಿಕಾರಿ ಪ್ರೇಮಾನಂದ, ಗ್ರೇಡ್-2 ತಹಸೀಲ್ದಾರ ವೆಂಕಟೇಶ್, ಕಂದಾಯ ಅಧಿಕಾರಿಗಳಾದ ಅನಿಲ್ ಕುಮಾರ್ ಮತ್ತು ಅಂದಾನಯ್ಯಗೌಡ, ಶಿರಸ್ತೇದಾರರಾದ ಮಂಜುನಾಥ, ಅಮರನಾಥ, ಶಿವ ರತ್ನಮ್ಮ, ನವೀನ್ ಕುಮಾರ್, ಶ್ರೀಧರ್ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ರವಿಚಂದ್ರ, ಜಿಲ್ಲಾ ಕೆಡಿಪಿ ಸದಸ್ಯ ಕಾಳಪ್ಪ, ಭೂ ನ್ಯಾಯ ಮಂಡಳಿ ಸದಸ್ಯ ಎ.ಕೆ. ಉದೇದಪ್ಪ, ಮುಖಂಡರಾದ ಅಂಜಿನಪ್ಪ, ಬಸವರಾಜ್, ಚಂದ್ರಶೇಖರಪ್ಪ, ಮೇಟಿ ಪಂಪಾಪತಿ, ಮಂಜಣ್ಣ, ಉದ್ದಾನಪ್ಪ, ಸೈಯದ್ ಖಾದ್ರಿ ಮತ್ತಿತರರಿದ್ದರು.