ಎಐ ತಂತ್ರಜ್ಞಾನದ ಸಕಾರಾತ್ಮಕ ಪರಿಣಾಮಕ್ಕೆ ಮಹತ್ವ ನೀಡಲಿ

KannadaprabhaNewsNetwork |  
Published : Nov 03, 2025, 02:15 AM IST
2ಡಿಡಬ್ಲೂಡಿ6ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ವೈ.ಬಿ. ಅಣ್ಣಿಗೇರಿ ಕಾಲೇಜಿನಲ್ಲಿ ಯುವ ಚಿಂತನಾ ಸಮಾವೇಶದ ಅಂಗವಾಗಿ ನಡೆದ ಸಮಾರಂಭದಲ್ಲಿ ಪರಿಸರ ತಜ್ಞ ಪಿ.ವಿ. ಹಿರೇಮಠ ಹಾಗೂ ಇತರರನ್ನು ಗೌರವಿಸಲಾಯಿತು.  | Kannada Prabha

ಸಾರಾಂಶ

ಕ್ರಿಯಾತ್ಮಕ ಯೋಜನೆಯಲ್ಲಿ ಎಐ ಬಳಕೆಯಿಂದ ಹೆಚ್ಚಿನ ದಕ್ಷತೆ, ನಿಖರತೆ, ಭಾಷಾ ಶುದ್ಧತೆ, ವಿಚಾರಗಳ ಉತ್ಕೃಷ್ಟತೆ, ಕೃತಿಚೌರ್ಯ ನಿವಾರಣೆಯಂತಹ ಹಲವಾರು ಪ್ರಯೋಜನಗಳು ಲಭಿಸುತ್ತವೆ.

ಧಾರವಾಡ:

ಕೃತಕ ಬುದ್ಧಿಮತ್ತೆ ಆಧಾರಿತ ಯೋಜನೆಯ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡು, ಯುವ ಸಮುದಾಯ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಗುಣಮಟ್ಟದ ಕಡೆಗೆ ಹಾಗೂ ಸಕಾರಾತ್ಮಕ ಚಿಂತನೆಗಳಿಗೆ ಒತ್ತು ಕೊಡುವ ಮೂಲಕ ಉತ್ಕೃಷ್ಟ ಜೀವನ ನಡೆಸಲು ಸಹಾಯಕವಾಗುತ್ತದೆ ಎಂದು ನೇಚರ್ ಫಸ್ಟ್‌ ಇಕೋ ವಿಲೇಜ್ ಸಂಸ್ಥಾಪಕ ಮತ್ತು ಪರಿಸರ ತಜ್ಞ ಪಿ.ವಿ. ಹಿರೇಮಠ ಹೇಳಿದರು.

ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ವೈ.ಬಿ. ಅಣ್ಣಿಗೇರಿ ಕಾಲೇಜಿನಲ್ಲಿ ಯುವ ಚಿಂತನಾ ಸಮಾವೇಶದ ಅಂಗವಾಗಿ ಧಾರವಾಡ, ಹಾವೇರಿ ಜಿಲ್ಲೆಯ ವಿವಿಧ 17 ಕಾಲೇಜುಗಳಲ್ಲಿ ಮತ್ತು 8 ಸಂಘ-ಸಂಸ್ಥೆಗಳಲ್ಲಿ ನಡೆಯುವ ಸಾಂಸ್ಕೃತಿಕ, ಜಾಗೃತ ಕಾರ್ಯಕ್ರಮ ಉದ್ಘಾಟಿಸಿ ಎಐ ತಂತ್ರಜ್ಞಾನ ಕುರಿತು ಅವರು ಮಾತನಾಡಿದರು.

ಕ್ರಿಯಾತ್ಮಕ ಯೋಜನೆಯಲ್ಲಿ ಎಐ ಬಳಕೆಯಿಂದ ಹೆಚ್ಚಿನ ದಕ್ಷತೆ, ನಿಖರತೆ, ಭಾಷಾ ಶುದ್ಧತೆ, ವಿಚಾರಗಳ ಉತ್ಕೃಷ್ಟತೆ, ಕೃತಿಚೌರ್ಯ ನಿವಾರಣೆಯಂತಹ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಆದರೆ, ಇದರಿಂದಾಗಿ ಕ್ರಿಯಾಶೀಲತೆಯ ಕೊರತೆ, ನೈತಿಕ ಸವಾಲುಗಳು, ತಂತ್ರಜ್ಞಾನದ ಮೇಲೆ ಅಪಾರ ಅವಲಂಬನೆ ಮತ್ತು ಸಂದರ್ಭವನ್ನು ಅರ್ಥೈಸಿಕೊಳ್ಳಲು ವಿಫಲತೆಯಂತಹ ಸಾಕಷ್ಟು ಸಮಸ್ಯೆಗಳೂ ಇವೆ ಎಂದರು.

ಎಐ ತಂತ್ರಜ್ಞಾನ ಶಿಕ್ಷಣ, ಆರೋಗ್ಯ, ಪರಿಸರ, ಬಾಹ್ಯಾಕಾಶ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಧನಾತ್ಮಕವಾಗಿ ಬಳಕೆ ಮಾಡುತ್ತಾ ಅಭಿವೃದ್ಧಿ ಹೊಂದಬಹುದು. ಯುವ ಸಮುದಾಯ ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿಕೊಂಡು ಬಳಕೆ ಮಾಡುವುದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಯುವಚಿಂತನಾ ಸಮಾವೇಶದ ಸರ್ವಾಧ್ಯಕ್ಷ ಸುನೀಲ ಬಾಗೇವಾಡಿ ಮಾತನಾಡಿ, ಎಐ ತಂತ್ರಜ್ಞಾನದಿಂದ ಅನಾಹುತಗಳೇನು? ಎಷ್ಟು ಉದ್ಯೋಗ ಕಡಿತಗೊಳ್ಳಲಿವೆ ಎನ್ನುವ ಅನಗತ್ಯ ಭಯಕ್ಕೆ ಒಳಗಾಗುವುದು ಬೇಡ. ವೈದ್ಯಕೀಯ ಸೇರಿ ಹೆಚ್ಚಿನ ಕ್ಷೇತ್ರದಲ್ಲಿ ಬದಲಾವಣೆಗೆ ಅವಕಾಶವಾಗುತ್ತಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯುವ ಸಮುದಾಯವನ್ನು ಸಜ್ಜುಗೊಳಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯೋದ್ಯಮಿ ವಿಜಯಕುಮಾರ ದೇವರಮನಿ ಮಾತನಾಡಿದರು. ಉಪನ್ಯಾಸಕ ಬಸವರಾಜ ಉಡಕೇರಿ, ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ್, ಸಿದ್ದು ಕಲ್ಯಾಣಶೆಟ್ಟಿ, ಅರುಣಕುಮಾರ ಶೀಲವಂತ, ಪ್ರಾಚಾರ್ಯ ನಿತ್ಯಾನಂದ ಕಾಟಗಾರ ಮಾತನಾಡಿದರು. ಸಂಘಟಕ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಸಹನಾ ಪಾಟೀಲ ನಿರೂಪಿಸಿದರು. ಭೂಮಿಕಾ ವಂದಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ