ಹೊಸಪೇಟೆ: ಕಲೆ ಯಾವಾಗಲೂ ನಿಂತ ನೀರಿನಂತಿರಬಾರದು, ಆಧುನಿಕ ಉಪಕರಣಗಳನ್ನು ಬಳಸಿ ಕಲೆಯನ್ನು ಉತ್ತುಂಗಕ್ಕೇರಿಸಬೇಕು ಎಂದು ಬಳ್ಳಾರಿಯ ರಂಗಕರ್ಮಿ ಕೆ. ಜಗದೀಶ್ ಹೇಳಿದರು.
ರಂಗ ಶಿಕ್ಷಣ ಪಡೆದವರಿಗೆ ಉದ್ಯೋಗ ಭದ್ರತೆ ಇಲ್ಲ. ಶಿಕ್ಷಣವಿಲ್ಲದ ಕಲಾವಿದರು ಮತ್ತು ಶಿಕ್ಷಣ ಪಡೆದ ಕಲಾವಿದರು ಒಟ್ಟಾಗಿದ್ದಾಗ ಮಾತ್ರ ರಂಗಭೂಮಿಯ ಸವಾಲುಗಳನ್ನು ನಿವಾರಣೆ ಮಾಡಿ ಅದನ್ನು ಸದೃಢವಾಗಿ ಬೆಳೆಸಲು ಸಾಧ್ಯವಾಗಲಿದೆ. ಇತಿಹಾಸದ ಬೆಳಕಿನಲ್ಲಿ ವರ್ತಮಾನವನ್ನು ಅರ್ಥ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ರಂಗಭೂಮಿ ಕಲಾವಿದರು ಬಣ್ಣ ಹಚ್ಚುವ ಮೂಲಕ ಇತಿಹಾಸದ ಪಾತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಸಮಾಜಕ್ಕೆ ತೋರಿಸುತ್ತಾರೆ. ಇಲ್ಲಿ ಸಮಸ್ಯೆಗಳಿವೆ, ಅವುಗಳನ್ನು ನಿವಾರಣೆ ಮಾಡಿಕೊಂಡು ನಡೆಯಬೇಕಿದೆ. ಜೊತೆಗೆ ಜನರ ನಾಡಿಮಿಡಿತ ಮತ್ತು ಬದಲಾದ ತಂತ್ರಜ್ಞಾನವನ್ನು ಅರ್ಥ ಮಾಡಿಕೊಂಡಾಗ ರಂಗಭೂಮಿಯಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.ಬಳ್ಳಾರಿಯ ಹಿರಿಯ ರಂಗಭೂಮಿ ಕಲಾವಿದರಾದ ಕೊಟ್ನೇಕಲ್ ರಂಗಮ್ಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಸುದೀರ್ಘವಾದ ಅಭ್ಯಾಸ ಮುಖ್ಯ. ನನ್ನ ಯಜಮಾನರು ಕಲಾವಿದರಾದ ಕಾರಣ ನನಗೆ ರಂಗಭೂಮಿಯಲ್ಲಿ ಪ್ರೋತ್ಸಾಹ ದೊರೆಯಿತು. ಗುರುಗಳು ಹೇಳಿದ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ನಡೆದರೆ ವಿದ್ಯಾರ್ಥಿಗಳ ಮುಂದಿನ ಜೀವನ ಬಂಗಾರವಾಗುತ್ತದೆ. ಸಾಧನೆ ಮೌನದಿಂದಲೇ ಶುರುವಾಗಬೇಕು, ನಮ್ಮದಲ್ಲದ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಗುರುಗಳು ಹೇಳಿದ ಒಳ್ಳೆಯ ವಿಚಾರಗಳನ್ನು ಅರಿತು ಮುನ್ನಡೆಯಬೇಕು ಎಂದು ಅವರು ಹೇಳಿದರು.
ಒಂದು ಕಾಲದಲ್ಲಿ ನಾಡಿನ ದೊಡ್ಡ ಸಮೂಹ ಸಂವಹನ ಕಲೆಯಾಗಿದ್ದ ನಾಟಕದ ಸ್ಥಾನವನ್ನು ಸಿನಿಮಾ ಆಕ್ರಮಿಸಿಕೊಂಡಿತು. ಇದರ ಜೊತೆಗೆ ಸೆಣಸಾಡುತ್ತ ಹೊಂದಾಣಿಕೆ ಮಾಡಿಕೊಂಡು ರಂಗಭೂಮಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು. ತಲೆಮಾರುಗಳಿಂದ ಬಂದ ಜಾನಪದ ಗೀತೆ ಪರಂಪರೆ ಇಂದು ಕೇಳಲು ಅಸಾಧ್ಯವಾಗುವ ರೀತಿಯಲ್ಲಿ ರಚನೆಯಾಗುತ್ತಿರುವುದನ್ನು ಕಾಣುತ್ತೇವೆ ಎಂದು ವಿಷಾದ ವ್ಯಕ್ತಪಡಿಸಿದರು. ಯಕ್ಷಗಾನ ಕಲೆಗೆ ಸಿಗುವ ಗೌರವ, ಭಕ್ತಿ ಬಯಲಾಟಕ್ಕೆ ಸಿಗುತ್ತಿಲ್ಲ. ಯಕ್ಷಗಾನ ವೃದ್ಧಿಯಾಗುತ್ತಿದೆ ಬಯಲಾಟ ಸ್ವರಗುತ್ತಿದೆ. ಹಾಗೆಯೇ ಬಯಲಾಟದಲ್ಲಿ ಅತಿಹೆಚ್ಚು ಕಲಾವಿದರಿದ್ದಾರೆ. ಅವರಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದೇವರಾಜ ಗಿಣಿಗೇರಿ ಮತ್ತು ತಂಡದವರಿಂದ ಸಂಗೀತ ಹಾಗೂ ನೃತ್ಯ ವಿಭಾಗದ ವಿದ್ಯಾರ್ಥಿಗಳಿಂದ ರಂಗಗೀತೆಗಳ ಗಾಯನ ನಡೆಯಿತು.