ನಾವು ಬದುಕೋಣ, ವನ್ಯಜೀವಿಗಳನ್ನು ಬದುಕಿಸೋಣ: 69ನೇ ವನ್ಯಜೀವಿ ಸಪ್ತಾಹದಲ್ಲಿ ಶಾಸಕ ಕೃಷ್ಣಮೂರ್ತಿ

KannadaprabhaNewsNetwork | Published : Oct 7, 2023 2:20 AM

ಸಾರಾಂಶ

ಬುದ್ಧನ ನುಡಿಯಂತೆ ಬದುಕಿ ಹಾಗೂ ಬದುಕಲು ಬಿಡಿ ಎಂಬ ನುಡಿಯು ಪರಿಸರ ಸಂರಕ್ಷಣೆ ಹಾಗೂ ಮಾನವ ಕುಲಕ್ಕೆ ಪ್ರಸ್ತುತವಾಗಿದ್ದು ಇದರ ಪಾಲನೆಯನ್ನು ಎಲ್ಲರೂ ಕಡ್ಡಾಯವಾಗಿ ಮಾಡಬೇಕಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು. ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಪೋಡಿನಲ್ಲಿರುವ ಸೋಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಅರಣ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ ಯಳಂದೂರು ಬುದ್ಧನ ನುಡಿಯಂತೆ ಬದುಕಿ ಹಾಗೂ ಬದುಕಲು ಬಿಡಿ ಎಂಬ ನುಡಿಯು ಪರಿಸರ ಸಂರಕ್ಷಣೆ ಹಾಗೂ ಮಾನವ ಕುಲಕ್ಕೆ ಪ್ರಸ್ತುತವಾಗಿದ್ದು ಇದರ ಪಾಲನೆಯನ್ನು ಎಲ್ಲರೂ ಕಡ್ಡಾಯವಾಗಿ ಮಾಡಬೇಕಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು. ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಪೋಡಿನಲ್ಲಿರುವ ಸೋಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಅರಣ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‘ಪರಿಸರ ಸಂರಕ್ಷಣೆ ಎಲ್ಲಾ ಜೀವಿಗಳಿಗೂ ಇಂದಿನ ತುರ್ತಾಗಿದೆ. ಇದನ್ನು ಸ್ವಚ್ಛ ಹಾಗೂ ಸುಂದರ ಮಾಡುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ನಮ್ಮ ಕಾಡನ್ನು ಪ್ಲಾಸ್ಟಿಕ್ ಮುಕ್ತ ಮಾಡಲು, ಕಸ ಮುಕ್ತ ಮಾಡಲು, ಇಲ್ಲಿನ ಅರಣ್ಯ ಸಂಪತ್ತನ್ನು ರಕ್ಷಿಸಲು ಎಲ್ಲರೂ ಪಣ ತೊಡಬೇಕು. ಶುದ್ಧ ಗಾಳಿ ಸಿಗಬೇಕಾದರೆ ಮಲಿನ ಮಾಡಬಾರದು. ಇದನ್ನು ಒಂದು ಸವಾಲಾಗಿ ಸ್ವೀಕರಿಸದಿದ್ದಲ್ಲಿ ಮುಂದಿನ ಪೀಳಿಗೆ ಬದುಕಲು ಕಷ್ಟವಾಗುತ್ತದೆ. ಹಾಗಾಗಿ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದ್ದು ಸ್ವಚ್ಛ ಭಾರತ್‌ನಂತಹ ಯೋಜನೆಗಳನ್ನು ಹಮ್ಮಿಕೊಂಡಿದೆ. ನಮ್ಮ ತಂದೆ ಬಿ. ರಾಚಯ್ಯ ಅರಣ್ಯ ಸಚಿವರಾಗಿದ್ದಾಗ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಅನೇಕ ರೈತರಿಗೆ ನೀಡಿದ್ದರೂ ಆದರೆ ದಾಖಲೆಗಳ ಸಮರ್ಪಕತೆ ಇಲ್ಲದೆ ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಅನೇಕ ರೈತರ ಜಮೀನುಗಳು ಸೇರಿರುವುದರಿಂದ ಈ ವಿಷಯವನ್ನು ಮುಖ್ಯಮಂತ್ರಿ ಹಾಗೂ ಅರಣ್ಯ ಮಂತ್ರಿಗಳ ಗಮನಕ್ಕೂ ತಂದು ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಹೇಳಿದರು. ಇಲ್ಲಿನ ಪುರಾಣಿ ಪೋಡು ಸೇರಿದಂತೆ ವಿವಿಧ ಪೋಡುಗಳಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಇಲ್ಲಿನ ಗಿರಿಜನರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು. ಬಿಆರ್‌ಟಿ ಹುಲಿ ರಕ್ಷಿತ ಪ್ರದೇಶದ ನಿರ್ದೇಶಕಿ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪ್ ಜೆ. ಕಾಂಟ್ರ್ಯಾಕ್ಟರ್ ಮಾತನಾಡಿ, ಪರಿಸರ ನಮ್ಮ ಜೀವ ಇದ್ದಂತೆ, ಇದನ್ನು ಸಂರಕ್ಷಿಸಿದರೆ ಇಡೀ ಜೀವ ಜಗತ್ತು ಮುಂದಿನ ಪೀಳಿಗೆಗೆ ಇರುತ್ತದೆ. ಕಾಡಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಇದನ್ನು ಘೋಷಣೆ ಮಾಡಿದ್ದು, ಈ ಬಗ್ಗೆ ನಾವು ಜಾಗೃತರಾಗಬೇಕು ಎಂದರು. ಕುಸುಮಬಾಲೆ ತಂಡದ ಸದಸ್ಯರು ನಡೆಸಿಕೊಟ್ಟ ಪರಿಸರ ಗೀತೆ ಹಾಗೂ ಗೊರುಕನ ನೃತ್ಯ ಗಮನ ಸೆಳೆಯಿತು. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಜಿ. ಮಲ್ಲೇಶಪ್ಪ, ಗ್ರಾಪಂ ಅಧ್ಯಕ್ಷ ಎಸ್. ಪ್ರತೀಪ್‌ಕುಮಾರ್ ಉಪಾಧ್ಯಕ್ಷೆ ಕಮಲಮ್ಮ, ಎಸಿಎಫ್ ರಮೇಶ್‌ಕುಮಾರ್, ಆರ್‌ಎಫ್‌ಒ ಚಂದ್ರಶೇಖರ್‌ ನಾಯಕ್, ಬೆಂಗಳೂರಿನ ಒನ್ ಸ್ಕೂಲ್ ಆಫ್ ಬ್ಯುಸಿನೆಸ್ ವಿದ್ಯಾರ್ಥಿಗಳು ಇದ್ದರು. ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಪೋಡಿನಲ್ಲಿರುವ ಸೋಲಿಗರ ಸಮುದಾಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು.

Share this article