ಹೊಸಪೇಟೆ: ಭಾಷಾ ಸೌಹಾರ್ದತೆಯ ಮೂಲಕ ಆಯಾ ಭಾಷೆಯ ಅಸ್ತಿತ್ವವನ್ನು ಗುರುತಿಸಬೇಕೆ ವಿನಃ ಭಾಷಿಕ ಗಡಿಗಳನ್ನು ಹಾಕಿಕೊಂಡು ಅದರ ಮೂಲವನ್ನು ತಿಳಿಯಬಾರದು ಎಂದು ಅನುವಾದಕ ಡಾ.ರಂಗನಾಥ ಅರನಕಟ್ಟೆ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಲ್ಲಮ ಸಭಾಂಗಣದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿ ಹಾಗೂ ಕನ್ನಡ ಮತ್ತು ತಮಿಳು ಸಾಹಿತ್ಯ: ಸೌಹಾರ್ದ ಪರಂಪರೆ ಎಂಬ ವಿಷಯದ ಕುರಿತು ಮಾತನಾಡಿದರು.ನಾವು ಹಾಕಿಕೊಂಡ ಮಿತಿಗಳೇ ಶಕ್ತಿಗಳಾಗಿ ವಿಜೃಂಭಿಸುವ ಕಾಲದಲ್ಲಿ ನಾವಿದ್ದೇವೆ. ಈಗ ನಾವು ಬಳಸುವ ಸೌಹಾರ್ದ ಎಂಬುದನ್ನು ಈಗಿನ ವಿದ್ವಾಂಸರುಗಳು ಚಾಲನೆಗೆ ತಂದಿಲ್ಲ. ಇದನ್ನು ನಮ್ಮ ಜನಪದರು ಮೌಖಿಕ ಪರಂಪರೆಯ ಮೂಲಕ ಸೌಹಾರ್ದತೆಯನ್ನು ಕಟ್ಟಿಕೊಂಡಿದ್ದರು. ಕನ್ನಡ ಮತ್ತು ತಮಿಳು ಭಾಷೆಗಳು ಮೂಲ ದ್ರಾವಿಡ ಭಾಷೆಯಲ್ಲಿ ಸೇರಿಕೊಂಡಿದ್ದವು. ಅವು ಚದುರಿಕೊಂಡು ತಮ್ಮದೇ ಆದ ನೆಲೆ ಕಂಡು ಕೊಂಡಿವೆ ಎಂದು ತಿಳಿಸಿದರು.
ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟಗಿರಿ ದಳವಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವು ಹಮ್ಮಿಕೊಳ್ಳುವ ಮೂಲಕ ಯಶಸ್ವಿ ಕಂಡಿತು. ಇಂದು ನಾವುಗಳು ಯಾವುದೇ ಭಾಷೆಯಾಗಿರಲಿ ಅದರ ರೀತಿಯಲ್ಲೇ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿದೆ. ಅದನ್ನು ಇಂದು ಪಾಲ್ಗೊಂಡ ಕವಿಗಳು ಕನ್ನಡ, ಹಿಂದಿ, ಲಂಬಾಣಿ, ಉರ್ದು, ತೆಲುಗು, ತಮಿಳು, ಇಂಗ್ಲಿಷ್, ಮರಾಠಿ ಭಾಷೆಯಲ್ಲಿ ತಾವು ರಚಿಸಿದ ಕವನಗಳನ್ನು ವಾಚಿಸಿರುವುದು ಪ್ರಸ್ತುತ ಕಾರ್ಯಕ್ರಮಕ್ಕೆ ತಳುಕು ಹಾಕಿಕೊಂಡಂತೆ ಆಯಿತು ಎಂದರು. ವಿಭಾಗದ ಸಂಚಾಲಕ ಡಾ. ಗೋವಿಂದ ಇದ್ದರು.ಬಹುಭಾಷಾ ಕವಿಗೋಷ್ಠಿ: ಆರಂಭದಲ್ಲಿ ಸಂಶೋಧನಾರ್ಥಿಗಳಾದ ಪವಿತ್ರಾ, ಶಬ್ರಿನಾಬಾನು, ಟಿ. ಅಕ್ಷತಾ, ಲೋಕೇಶ್ ಅವರು ಕನ್ನಡ ಭಾಷೆಯಲ್ಲಿ, ನಂತರ ಸುನಿಲ್ ಲಂಬಾಣಿ ಭಾಷೆಯ ಕವನ ವಾಚಿಸಿದರು. ಬಳಿಕ ನಂದಿನಿ, ಪ್ರಭಾಕರ, ರವೀಂದ್ರ, ಬೋರಯ್ಯ, ಪಾಲಯ್ಯ ತೆಲುಗು ಭಾಷೆ, ಖಾಜಾಸಾಬ್ ಉರ್ದು ಭಾಷೆ, ಶ್ವೇತಾ ಬಾಳಿ ಇಂಗ್ಲಿಷ್, ಇಸ್ಮಾಯಿಲ್ ಸಿದ್ದಿಕ್ ಹಿಂದಿ, ಮಂಜುನಾಥ ಮರಾಠಿ, ಡಾ. ರಾದಾಹಯಾತ್ ಉರ್ದು ಹಾಗೂ ಡಾ. ರಂಗನಾಥ ಅರನಕಟ್ಟೆ ಅವರು ತಮಿಳು ಭಾಷೆಯ ಕವನಗಳನ್ನು ವಾಚಿಸಿ ಜನಮನ ರಂಜಿಸಿದರು.