ಸಮ ಸಮಾಜ ಕಟ್ಟಲು ಸಂಕಲ್ಪ ಮಾಡೋಣ: ಶಿವರಾಜ ತಂಗಡಗಿ

KannadaprabhaNewsNetwork |  
Published : Aug 16, 2024, 12:55 AM IST
ಪೋಟೊ15.8: ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪೋಟೊ15.8 : ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ  ಆಕರ್ಷಕ ಪಥ ಸಂಚಲನ ನಡೆಯಿತು. | Kannada Prabha

ಸಾರಾಂಶ

ಜವಾಹರಲಾಲ್ ನೆಹರು 1947ರ ಆ. 14ರ ಮಧ್ಯರಾತ್ರಿ ಭಾರತೀಯ ರಾಜ್ಯಾಂಗದ ಕುರಿತು ಮಾಡಿದ ಭಾಷಣವನ್ನು ಸ್ಮರಿಸಬೇಕಿದೆ.

ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಪ್ರಭ ವಾರ್ತೆ ಕೊಪ್ಪಳ

ನಮ್ಮ ದೇಶದ ಸ್ವಾತಂತ್ರ್ಯದ ಹೋರಾಟಗಾಥೆ ಸ್ಮರಣೀಯವಾಗಿದ್ದು, ಜವಾಹರಲಾಲ್ ನೆಹರು 1947ರ ಆ. 14ರ ಮಧ್ಯರಾತ್ರಿ ಭಾರತೀಯ ರಾಜ್ಯಾಂಗದ ಕುರಿತು ಮಾಡಿದ ಭಾಷಣವನ್ನು ಸ್ಮರಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಜಾತಿ, ಧರ್ಮ, ಭೇದ-ಭಾವ ಹೊಂದದೆ ಎಲ್ಲರೂ ಸಮಾನರಾಗಿ ಶಾಂತಿಯಿಂದ ಬಾಳೋಣ. ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮ ಸಮಾಜ ಕಟ್ಟಲು ಸಂಕಲ್ಪ ಮಾಡೋಣ ಎಂದರು.

ಸಕಲ ಜಾತಿ, ಧರ್ಮ, ಭಾಷೆ, ಪ್ರದೇಶಗಳ ಜನರೆಲ್ಲ ಒಗ್ಗಟ್ಟಾಗಿ ಬೃಹತ್ ಪ್ರಜಾಪ್ರಭುತ್ವದ ಯಶಸ್ಸಿಗಾಗಿ ನಾವೆಲ್ಲರೂ ಸಾಮರಸ್ಯದಿಂದ ಬಾಳುತ್ತಿದ್ದೇವೆ. ಬಹುಜನರ ಒಳಿತಿಗಾಗಿ ಬಹುಜನರ ಕಲ್ಯಾಣಕ್ಕಾಗಿ ಎಂಬ ಮಂತ್ರವನ್ನು ಸಾರುತ್ತಾ ಭವ್ಯಭಾರತ ಕಟ್ಟುವ ಸಂಕಲ್ಪ ಮಾಡೋಣ, ಭಾರತಕ್ಕೊಂದು ಹೊಸ ಭಾಷ್ಯ ಬರೆಯೋಣ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಅಭಿವೃದ್ಧಿಯ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಅಂಕಿ-ಅಂಶಗಳ ಸಮೇತ ಸಮಗ್ರವಾದ ಮಾಹಿತಿ ನೀಡಿದ ಸಚಿವರು, ಜಿಲ್ಲೆಯಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳು ಹಾಗೂ ಆ ಕಾರ್ಯಗಳಿಗೆ ಬಂದಿರುವ ಅನುದಾನದ ವಿವರ ನೀಡಿದರು.

ಸಂಭ್ರಮ:

ಸಚಿವರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಕ್ರೀಡಾಂಗಣದ ಅಂಗಳದಲ್ಲಿ ಸಂಭ್ರಮ ಕಂಡು ಬಂದಿತು. ವಿದ್ಯಾರ್ಥಿ, ಯುವಜನರು ಸೇರಿದಂತೆ ಸೇರಿದ್ದ ಜನಸ್ತೋಮದಿಂದ ಚಪ್ಪಾಳೆ ಮೊಳಗಿತು. ರಾಷ್ಟ್ರಗೀತೆ ಹಾಡಲಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿಗಳ ತ್ಯಾಗ ಸಾಧನೆ ಸ್ಮರಿಸಲಾಯಿತು. ಧ್ವಜಾರೋಹಣದ ಬಳಿಕ ಸಚಿವರು ಪರೇಡ್ ವೀಕ್ಷಣೆ ಕೈಗೊಂಡರು.ಆಕರ್ಷಕ ಪಥ ಸಂಚಲನ:

ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ, ಅರಣ್ಯ ಇಲಾಖೆ, ಅಗ್ನಿಶಾಮಕ ಪಡೆ, ಗೃಹರಕ್ಷಕ ದಳ, ಮಹಿಳಾ ರಕ್ಷಕ ದಳ, ಗವಿಸಿದ್ದೇಶ್ವರ ಪ್ರೌಢಶಾಲೆಯ ಎನ್‌ಸಿಸಿ ದಳ, ಬಾಲಕರ ಪ್ರೌಢಶಾಲೆಯ ಎನ್‌ಸಿಸಿ, ಬಾಲಕಿಯರ ಪ್ರೌಢಶಾಲೆಯ ಸೇವಾದಳ, ಶಾಂತಿನಿಕೇತನ ಶಾಲೆ, ಕಾಳಿದಾಸ ಶಾಲೆ, ಎಸ್ಎಫ್ಎಸ್ ಶಾಲೆ, ಶಿವಶಾಂತವೀರ ಪ್ರೌಢಶಾಲೆ, ಗವಿಸಿದ್ದೇಶ್ವರ ಶಾಲೆಯ ಸ್ಕೌಟ್ಸ್ ಪಡೆ, ವಿವೇಕಾನಂದ ಪ್ರೌಢಶಾಲೆಯ ಗೈಡ್ಸ್ ಪಡೆ, ನ್ಯೂ ಆಕ್ಸಫರ್ಡ್ ಶಾಲೆಯ ವಿದ್ಯಾರ್ಥಿ ತಂಡ ಸೇರಿದಂತೆ ವಿವಿಧ 19 ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಂವಿಧಾನ ಗ್ರಂಥ ವೀಕ್ಷಣೆ:

ಸ್ವಾತಂತ್ರೋತ್ಸವ ದಿನಾಚರಣೆ ಹಿನ್ನೆಲೆ ಜಿಲ್ಲಾ ಕ್ರೀಡಾಂಗಣದ ದ್ವಾರ ಬಾಗಿಲಿನಲ್ಲಿ ಇಡಲಾಗಿದ್ದ ಜಾಗತಿಕ ಪವಿತ್ರ ಗ್ರಂಥ ಸಂವಿಧಾನವನ್ನು ಸಚಿವರು ವೀಕ್ಷಣೆ ಮಾಡಿದರು.ಪ್ರಾತ್ಯಕ್ಷಿಕೆಯ ವೀಕ್ಷಣೆ:

ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ ಮಿಷನ್‌ನಿಂದ ನಿರ್ಮಿಸಿದ್ದ ವೈಯಕ್ತಿಕ ಶೌಚಾಲಯ ಬಳಕೆಯ ವಿಧಾನಗಳ ಮಾಹಿತಿಯ ಪ್ರಾತ್ಯಕ್ಷಿಕೆ ಯನ್ನು ಸಹ ಸಚಿವರು ವೀಕ್ಷಿಸಿದರು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ವಿಠ್ಠಲ್ ಚೌಗಲಾ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ಧರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ