ನವಲಗುಂದ: ಈಗಿನ ದಿನಮಾನಗಳಲ್ಲಿ ಹಳ್ಳಿಯ ಸೊಗಡುಗಳಾದಂತಹ ಕಬಡ್ಡಿ, ಖೋಖೋ, ಚಿನಿಪಣಿ ಸೇರಿದಂತೆ ಅನೇಕ ಕ್ರೀಡೆಗಳು ಮಾಸಿ ಹೋಗುತ್ತಿವೆ. ನಮ್ಮ ದೇಸಿಯ ಆಟಗಳು ಜೀವಂತವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಸಂಸದ ಪ್ರಹ್ಲಾದ ಜೋಶಿ ಅವರು ದೇಸಿ ಆಟಗಳ ಮುಖಾಂತರ ಹಳ್ಳಿಯ ಪ್ರತಿಭೆಗಳನ್ನು ಹೊರ ಹಾಕುತ್ತಿರುವುದು ಸಂತಸ ತಂದಿದೆ ಎಂದು ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಈ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ. ಆಟದಲ್ಲಿ ಸೋಲು-ಗೆಲವು ಸರ್ವೇ ಸಾಮಾನ್ಯ. ಸೋತವರು ಮುಂದೆ ಒಂದು ದಿನ ಗೆಲ್ಲಲೇಬೇಕು. ಯಾರು ನಿರಾಸೆಯಾಗದೆ ಎಲ್ಲವೂ ಒಂದು ರೀತಿಯ ಅನುಭವ ತಂದುಕೊಡುತ್ತದೆ. ಆಟಗಾರರು ಮತ್ತೆ ಇಂತಹ ಅವಕಾಶಗಳು ಬಂದಾಗ ಅವುಗಳ ಸದುಪಯೋಗ ಪಡೆದುಕೊಂಡು ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು ಎಂದರು.
ನಂತರ ಮಾತನಾಡಿದ ಮಾಜಿ ಸಚಿವ ಸಿ.ಸಿ. ಪಾಟೀಲ, ಈ ದೇಸಿ ಆಟಕ್ಕೆ ಪ್ರೊ. ಕಬಡ್ಡಿ ಬಂದನಂತರ ಹೆಚ್ಚಿನ ಪ್ರೋತ್ಸಾಹ ಸಿಕ್ಕು ಎಲ್ಲ ಕಡೆ ಪಂದ್ಯಾವಳಿಗಳು ನಡೆಯುತ್ತಿವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿ ಆದರ್ಶ ಸಚಿವರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.ಸ್ಥಳೀಯ ಆಟಗಾರರು ಮತ್ತು ಕ್ರೀಡಾಪಟುಗಳಿಗೆ ಅವಕಾಶ ಸಿಗಬೇಕು. ಅವರಲ್ಲಿರುವ ಪ್ರತಿಭೆಗಳು ಹೊರಹೊಮ್ಮಿ ತಾಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿಯೂ ಒಳ್ಳೆಯ ಪ್ರತಿಭೆಗಳಿಗೆ ಅವಕಾಶಗಳು ಸಿಗಬೇಕೆಂಬ ಉದ್ದೇಶದಿಂದ ಇಂತಹ ಕ್ರೀಡೆಗಳನ್ನು ಆಯೋಜನೆ ಮಾಡಿದ್ದಾರೆ. ಮೂರು ದಿನಗಳ ಕಾಲ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದೆ. ಇಂತಹ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕೇಂದ್ರ ಸಚಿವರಿಗೆ ಅಭಿನಂದನೆಗಳು ಎಂದರು.
ಮೊರಬ ಗ್ರಾಮದ ಜೈ ಹನುಮಾನ ತಂಡ ತೃತೀಯ ಸ್ಥಾನ, ಅಣ್ಣಿಗೇರಿ ತಾಲೂಕಿನ ಶ್ರೀ ಅಮೃತೇಶ್ವರ ಸ್ಪೋರ್ಟ್ಸ್ ಕ್ಲಬ್ ತಂಡ ನಾಲ್ಕನೇ ಸ್ಥಾನ ಪಡೆದಿದೆ.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ಈಗಾಗಲೇ ಅಣ್ಣಿಗೇರಿ ತಾಲೂಕಿನಲ್ಲಿ ಒಳಕ್ರೀಡಾಂಗಣ ಮತ್ತು ಈಜುಕೊಳಕ್ಕೆ ₹5 ಕೋಟಿ ಮಂಜೂರು ಮಾಡಲಾಗಿದ್ದು, ಸದ್ಯದಲ್ಲಿಯೆ ಕೆಲ ದಿನಗಳಲ್ಲಿ ಅದರ ಉದ್ಘಾಟನೆ ನಡೆಯಲಿದೆ. ಅದೇ ರೀತಿ ನವಲಗುಂದದಲ್ಲಿಯೂ ಕ್ರೀಡಾಂಗಣ ಮತ್ತು ಈಜುಕೊಳಕ್ಕೆ ಜಾಗೆ ನೀಡಿದರೆ ₹5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸುತ್ತೇವೆ. ಆದರೆ, ರಾಜ್ಯ ಸರಕಾರ ಜಾಗೆಯನ್ನು ನೀಡಲು ಮುಂದಾಗಬೇಕು ಎಂದರು.