ಹೊಸಪೇಟೆ: ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ರಾಜ್ಯ ಸರ್ಕಾರದಿಂದ 2018ರಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಮೂರು ಪ್ರಶ್ನೆಗಳನ್ನು ಮುಂದಿಟ್ಟು ರಾಜ್ಯ ಸರ್ಕಾರಕ್ಕೆ ಉತ್ತರ ಕೇಳಿದೆ. ಕೇಂದ್ರಕ್ಕೆ ಸಮರ್ಪಕ ಉತ್ತರದೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಲಿಂಗಾಯತರು ಒಗ್ಗೂಡಿ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಸಲ್ಲಿಸೋಣ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ಹೇಳಿದರು.
2018ರಲ್ಲೇ ಕೇಂದ್ರ ಸರ್ಕಾರ ಮೂರು ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಕೇಳಿದರೂ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರಗಳು ಉತ್ತರಿಸಿಲ್ಲ. ಲಿಂಗಾಯತರು ಜಾಣರು ಅರ್ಥ ಮಾಡಿಕೊಳ್ಳಬೇಕು ಎಂದರು.
ಲಿಂಗಾಯತರು ಒಗ್ಗೂಡಿ ಸಲ್ಲಿಸಲಿರುವ ಮನವಿ 94 ಪುಟಗಳಲ್ಲಿದೆ. ಈ ಮನವಿ ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕ ಹೊರ ತಂದು ಒಂದು ಲಕ್ಷ ಪ್ರತಿಗಳನ್ನು ಹಂಚಲಾಗುವುದು ಎಂದರು.ಕೇಂದ್ರ ಸರ್ಕಾರ ಲಿಂಗಾಯತ ಧರ್ಮದಲ್ಲಿ ದಲಿತರು ಇದ್ದಾರೆ. ಸ್ವತಂತ್ರ ಧರ್ಮ ಮಾಡಿದರೆ, ದಲಿತರು ಸೌಲಭ್ಯ ವಂಚಿತರಾಗಲಿದ್ದಾರೆ ಎಂದು ಸುಳ್ಳು ಹೇಳಿದೆ. ಆದರೆ, ಸಿಖ್, ಬೌದ್ಧ ಧರ್ಮದಲ್ಲಿ ದಲಿತರಿದ್ದಾರೆ. ಅವರು ಸೌಲಭ್ಯ ವಂಚಿತರಾಗಿದ್ದಾರಾ ಎಂದು ಪ್ರಶ್ನಿಸಿದರು.
ಇನ್ನು 1871ರ ಜಾತಿ ಗಣತಿಯಲ್ಲಿ ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿದ್ದರು ಎಂದು ಹೇಳಿದೆ. ಆದರೆ, ಹಿಂದೂ ಧರ್ಮದ ಭಾಗವಾಗಿದ್ದ ಸಿಖ್ ಧರ್ಮಕ್ಕೆ 1963ರಲ್ಲಿ ಮತ್ತು ಬೌದ್ಧ ಧರ್ಮಕ್ಕೆ 1993ರಲ್ಲಿ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಲಾಗಿದೆ. ಇನ್ನು ಜೈನರಿಗೆ 2014ರಲ್ಲಿ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಲಾಗಿದೆ. 900 ವರ್ಷಗಳ ಇತಿಹಾಸ ಹೊಂದಿರುವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲಾಗುತ್ತಿಲ್ಲ. ಇದರಿಂದ ಲಿಂಗಾಯತರಿಗೆ ದೊರೆಯುವ ಅಲ್ಪಸಂಖ್ಯಾತರ ಸೌಲಭ್ಯ ಮರೆಯಾಗುತ್ತಿದೆ ಎಂದರು.ಬಾಚಿಗೊಂಡನಹಳ್ಳಿಯ ಶಿವಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಕೇಂಪಗೌಡರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಗುಂಗಡ ಶೆಟ್ಟರ್, ಬಸವರಾಜ ರೊಟ್ಟಿ, ಡಾ. ಟಿ.ಆರ್. ಚಂದ್ರಶೇಖರ, ನಾಗನಗೌಡರು, ಹೇಮಯ್ಯಸ್ವಾಮಿ, ಮೆಟ್ರಿ ಮಲ್ಲಿಕಾರ್ಜುನ, ಪರಮೇಶ್ವರಪ್ಪ, ಮಾವಿನಹಳ್ಳಿ ಬಸವರಾಜ, ಡಾ. ಜೆ.ಎಸ್. ಪಾಟೀಲ, ಕೋರಿಶೆಟ್ಟಿ ಲಿಂಗಪ್ಪ, ಡಾ. ಮಹಾಬಲೇಶ್ವರ ರೆಡ್ಡಿ, ಗೌರಮ್ಮ, ಪ್ರೇಮಾ, ಸರ್ವಮಂಗಳಮ್ಮ ಮತ್ತಿತರರಿದ್ದರು. ಉಪನ್ಯಾಸಕ ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು. ಅಂಗಡಿ ವಾಮದೇವ ಪ್ರಾರ್ಥಿಸಿದರು. ಬಸವರಾಜ ಮತ್ತಿತರರಿದ್ದರು.