ಹೊಸಪೇಟೆ: ಸ್ಮಾರಕಗಳ ಸಂರಕ್ಷಣೆ ಮತ್ತು ಅವುಗಳ ಮಹತ್ವ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕಿದೆ. ಪತ್ರಕರ್ತರು ಹಾಗೂ ಪ್ರವಾಸಿ ಮಾರ್ಗದರ್ಶಿಗಳು ನೈಜ ಇತಿಹಾಸ ಪಸರಿಸುವ ಕಾರ್ಯ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಪತ್ರಿಕಾ ದಿನಾಚರಣೆ ನಿಮಿತ್ತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಯೋಗದಲ್ಲಿ ಬುಧವಾರ ಹಂಪಿಯಲ್ಲಿ ಆಯೋಜಿಸಿದ್ದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು. ಹಂಪಿಯ ರಾಣಿ ಸ್ನಾನಗೃಹದ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದಲ್ಲಿ ಐತಿಹಾಸಿಕ ಸ್ಮಾರಕಗಳು ಇರುವುದು ನಮ್ಮ ಭಾಗದ ಹೆಮ್ಮೆಯಾಗಿದೆ. ಆ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ, ನೈಜ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ ಎಂದರು.ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿ.ಎಲ್. ಮಾತಮಾಡಿ, ಪತ್ರಕರ್ತರು ಪಾರಂಪರಿಕ ನಡಿಗೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ಭಾಗದ ಸ್ಮಾರಕ ಉಳವಿಗೆ, ಅರಿವಿಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಹಂಪಿ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ನಿಹಿಲ್ ದಾಸ್ ಮಾತನಾಡಿ, ಹಂಪಿ ಅದ್ಭುತ, ಪ್ರವಾಸೋದ್ಯಮ ಇನ್ನು ಅಭಿವೃದ್ಧಿಯಾದರೆ, ಈ ಭಾಗದ ಜನರಿಗೆ ಉದ್ಯೋಗಾವಕಾಶ ಹೆಚ್ಚುತ್ತವೆ. ಹಂಪಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೇ ನೀಲನಕ್ಷೆ ತಯಾರು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಭಾಗದ ಜನರು ಹಂಪಿಯನ್ನು ಕಳೆದುಕೊಳ್ಳಬಾರದು, ಹಂಪಿಯ ಒಂದೊಂದು ಕಲ್ಲುಗಳು ಒಂದೊಂದು ಕತೆಗಳನ್ನು ಹೇಳುತ್ತವೆ. ಈ ಭಾಗದ ಜನರಿಗೆ ಹಂಪಿಯ ಸಮಗ್ರ ಅಭಿವೃದ್ಧಿಯಿಂದಾಗಿ ಅದ್ಭುತ ಉದ್ಯೋಗಾವಕಾಶಗಳು ಸಿಗುತ್ತದೆ ಎಂದರು.ರಾಣಿ ಸ್ನಾನ ಗೃಹದಿಂದ ಪ್ರಾರಂಭವಾದ ಪಾರಂಪರಿಕ ನಡಿಗೆ ಮಹಾನವಮಿ ದಿಬ್ಬ, ಪಾನ್ ಸುಪಾರಿ ಬಜಾರ್, ಪಟ್ಟಣದ ಎಲ್ಲಮ್ಮ ದೇಗುಲ, ಗಜಶಾಲೆ, ಕಮಲ ಮಹಲ್ ಮೂಲಕ ಸಾಗಿ ಹಜಾರರಾಮ ದೇವಸ್ಥಾನದ ಆವರಣಕ್ಕೆ ಮುಕ್ತಾಯಗೊಂಡಿತು.
ಕಾನಿಪ ಜಿಲ್ಲಾಧಕ್ಷ ಪಿ. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ಕಾನಿಪ ಸಂಘದ ರಾಜ್ಯ ಸಮಿತಿ ಸದಸ್ಯ ವೆಂಕೋಬ ನಾಯಕ ಪೂಜಾರ್, ಖಜಾಂಚಿ ವೆಂಕಟೇಶ್, ಪ್ರವಾಸೋದ್ಯಮ ಇಲಾಖೆಯ ಡಿಡಿ ಪ್ರಭುಲಿಂಗ ತಳಕೇರಿ, ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಅಭಿಯಂತರ ವಿನೋಜ್ ಕುಮಾರ್, ಸಂರಕ್ಷಣಾ ಸಹಾಯಕರಾದ ಸುನೀಲ್ ಕುಮಾರ್ ಎಂ.ಸಿ., ಎಚ್.ರವೀಂದ್ರನಾಥ್, ಪತ್ರಕರ್ತರಾದ ಅನಂತ ಜೋಶಿ, ಬಸಾಪುರ ಬಸವರಾಜ್, ಕೆ. ಸುರೇಶ್ ಚೌವ್ಹಾಣ್, ಮಂಜುನಾಥ್ ಅಯ್ಯಸ್ವಾಮಿ, ಅನಂತ ಪದ್ಮನಾಭ ರಾವ್, ಜಯಪ್ಪ ರಾಥೋಡ್, ಭೀಮಾ ನಾಯ್ಕ, ಅಂಬರೀಶ್ ವಾಲ್ಮೀಕಿ, ಖವಾಸ್ ಕೆ.ಬಿ., ಇಂದಿರಾ ಕಲಾಲ್, ಸಂಜಯ್ ಕುಮಾರ್ ಮುರೋಳ್, ಅನೂಪಕುಮಾರ್, ಮೃತ್ಯುಂಜಯ ಹಿರೇಮಠ್, ಛಾಯಾಗ್ರಾಹಕರಾದ ವಿಜಯ್ ಕುಮಾರ್, ಕೊಟ್ರೇಶ್, ಮೈನು ಇದ್ದರು.ಹಂಪಿ ಸಿಪಿಐ ಯಾತನೂರ್, ಪಿಎಸ್‌ಐ ಶಿವಕುಮಾರ್, ಪ್ರವಾಸಿ ಮಾರ್ಗದರ್ಶಿಗಳಾದ ಈರಣ್ಣ ಪೂಜಾರಿ, ವಿರೂಪಾಕ್ಷಿ, ಡಾ.ವಿಶ್ವನಾಥ್ ಮಾಳ್ಗಿ ಭಾಗವಹಿಸಿದ್ದರು.