- ಜೆ.ಪಿ. ನಡ್ಡಾ, ಅಮಿತ್ ಶಾ , ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪತ್ರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವರದೇ ಪಕ್ಷದ ಕಾರ್ಯಕರ್ತರು ಪತ್ರ ಅಭಿಯಾನ ಕೈಗೊಂಡಿದ್ದಾರೆ.ಕಳೆದ ಎರಡು ಅವಧಿಯಲ್ಲಿ ಅವರು ಕ್ಷೇತ್ರದ ಸಂಸದರಾಗಿದ್ದು, ಅವರಿಂದ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹಾಗಾಗಿ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದಾರೆ.ಹೀಗೆ ಬರೆದಿರುವ ಪತ್ರಗಳನ್ನು ಚಿಕ್ಕಮಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಕಾರ್ಯಕರ್ತರು ಬುಧವಾರ ಪೋಸ್ಟ್ ಮಾಡಿದರು. ಆದರೆ, ಅವರು ತಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಜಿಲ್ಲಾ ಬಿಜೆಪಿ ಹೇಳಿದೆ.ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಇದೇ ರೀತಿಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೋ ಬ್ಯಾಕ್ ಶೋಭಾ ಎಂಬ ಕೂಗು ಕೇಳಿ ಬಂದಿತ್ತು. ಇದು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡಿತ್ತು. ಬಿಜೆಪಿ ಮುಂಚೂಣಿಯ ನಾಯಕರೇ ತೆರೆಯ ಮರೆಯಲ್ಲಿ ಈ ಕಸರತ್ತು ನಡೆಸಿದ್ದರು. ಎರಡನೇ ಹಂತದಲ್ಲಿ ಸಭೆಯನ್ನು ಕೂಡ ನಡೆಸಿದ್ದರು.ಇದರ ಹಿಂದೆ ಯಾರಿದ್ದಾರೆಂದು ಗೊತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಅವರು ಹೇಳಿದ್ದು ಗೋ ಬ್ಯಾಕ್ ಶೋಭಾ ಅಲ್ಲ, ಗೋ ಬ್ಯಾಕ್ ಶೋಭಾ ಟು ಪಾರ್ಲಿಮೆಂಟ್ ಎಂದು ತಿಳಿಸಿದ್ದರು. ಪಕ್ಷವೂ ಎರಡನೇ ಬಾರಿಗೆ ಅವರಿಗೆ ಟಿಕೆಟ್ ನೀಡಿತ್ತು. ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು. ಗೋ ಬ್ಯಾಕ್ ಎಂದವರು ಶೋಭಾ ಕರಂದ್ಲಾಜೆ ಅವರು ಸಚಿವರಾದಾಗ ಚಿಕ್ಕಮಗಳೂರಿನಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದರು.ಕಳೆದ ಚುನಾವಣೆಯಲ್ಲಿ ಇಷ್ಟೆಲ್ಲಾ ಬೆಳವಣಿಗೆಯಾಗಿತ್ತು. ಈ ಬಾರಿಯೂ ಇದೇ ರೀತಿ ಬೆಳವಣಿಗೆ ಶುರುವಾಗಿದೆ. ಶೋಭಾ ಕರಂದ್ಲಾಜೆ ಸಹ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಕಾರ್ಯಕರ್ತರ ಪತ್ರ ಅಭಿಯಾನಕ್ಕೆ ಪಕ್ಷ ಮಣೆ ಹಾಕುತ್ತದೆಯೋ ನೋಡಬೇಕಾಗಿದೆ. 21 ಕೆಸಿಕೆಎಂ 4ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೇಟ್ ನೀಡಬಾರದೆಂದು ಪತ್ರ ಅಭಿಯಾನ ನಡೆಸಿರುವ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರಿನ ಅಂಚೆ ಕಚೇರಿಯಲ್ಲಿ ಪತ್ರವನ್ನು ಪೋಸ್ಟ್ ಮಾಡಿದರು.