ತುಳುವಿಗೆ ವಿಶೇಷ ಸ್ಥಾನಮಾನ ಹೋರಾಟ ನಡುವೆಯೇ ಪತ್ರ ವಿವಾದ ಈಗ ಶಮನ

KannadaprabhaNewsNetwork |  
Published : Jun 22, 2025, 01:18 AM IST
ಜಿ.ಪಂ. ಸ್ಪಷ್ಟನೆ ನೀಡಿ ವಾಪಸ್‌ ಬರೆದ ಪತ್ರ  | Kannada Prabha

ಸಾರಾಂಶ

ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಜನಪ್ರತಿನಿಧಿಗಳು ಚರ್ಚಿಸುವ ಸಂದರ್ಭದಲ್ಲಿ ತುಳುಭಾಷೆ ಬಳಕೆ ಮಾಡುವುದಕ್ಕೆ ಕಾನೂನಿನ ನಿಯಾಮನುಸಾರ ಯಾವುದೇ ನಿರ್ಬಂಧ ಇರುವುದಿಲ್ಲ. ಅಲ್ಲದೆ ಪತ್ರದಲ್ಲಿ ತುಳು ಭಾಷೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೂ ವಿವಾದಕ್ಕೆ ಕಾರಣವಾಗುವ ಈ ಪತ್ರವನ್ನು ಕೂಡಲೇ ಜಿ.ಪಂ. ವಾಪಸ್‌ ಪಡೆಯಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ಆಗ್ರಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳು ಭಾಷೆಗೆ ವಿಶೇಷ ಸ್ಥಾನಮಾನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತುಳು ಭಾಷಿಕರು ಒತ್ತಡ ಹಾಕುತ್ತಿರುವ ನಡುವೆಯೇ ಸರ್ಕಾರ ಕೂಡ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದೆ. ಈ ಮಧ್ಯೆ ದ.ಕ. ಜಿಲ್ಲಾ ಪಂಚಾಯ್ತಿ ಸಿಇಒ ಅವರು ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆ ನಿರ್ಬಂಧ ಕುರಿತಂತೆ ಸಂಘಟನೆಯೊಂದರ ಬೇಡಿಕೆ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಸೂಚನಾ ಪತ್ರ ಬರೆದಿರುವುದು ಬಹಿರಂಗಗೊಂಡಿದೆ. ಇದು ವಿವಾದಕ್ಕೆ ತಿರುಗುತ್ತಿದ್ದಂತೆಯೇ ತುಳು ವಿರುದ್ಧ ಆದೇಶ ಹೊರಡಿಸಿಲ್ಲ ಎಂದು ಪತ್ರ ಮುಖೇನ ಜಿ.ಪಂ. ಸ್ಪಷ್ಟನೆ ನೀಡಿದೆ.

ಕಾರ್ಕಳದ ಯಶಸ್ವಿ ನಾಗರಿಕರ ಸೇವಾ ಸಂಘದ ಸಂಚಾಲಕ ಮುರಳೀಧರ ಎನ್ನುವವರು ದ.ಕ. ಜಿ.ಪಂ. ಈ ಬಗ್ಗೆ 12-2-2025ರಂದು ದ.ಕ. ಜಿಲ್ಲಾ ಪಂಚಾಯ್ತಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಕೆ ಮಾಡದಂತೆ ಮತ್ತು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಈ ವಾಕ್ಯವನ್ನು ಉಲ್ಲೇಖಿಸಿ ಈ ಮನವಿ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಿಇಒ ಪರವಾಗಿ ಉಪ ಕಾರ್ಯದರ್ಶಿಗಳು ಎಲ್ಲ ತಾಲೂಕು ಪಂಚಾಯ್ತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಏಪ್ರಿಲ್‌ 22ರಂದು ಡಿಜಿಟಲ್‌ ಸಹಿಯೊಂದಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಕೈಗೊಂಡ ಕ್ರಮದ ಬಗ್ಗೆ ದೂರುದಾರರಿಗೂ ಮಾಹಿತಿ ಪ್ರತಿ ಕಳುಹಿಸಿದ್ದಾರೆ. ಇದೀಗ ತಾಲೂಕು ಪಂಚಾಯ್ತಿಗಳಿಗಳಿಗೆ ಪತ್ರ ಬರೆದು ಎರಡು ತಿಂಗಳು ಕಳೆದಿದೆ. ಈಗ ಈ ಪತ್ರ ವೈರಲ್‌ ಆಗಿದ್ದು, ಜಿ.ಪಂ. ಅಧಿಕಾರಿಗಳು ತುಳು ವಿರೋಧಿ ಧೋರಣೆ ತಳೆಯುತ್ತಿದ್ದಾರೆ ಎಂದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಜನಪ್ರತಿನಿಧಿಗಳು ಚರ್ಚಿಸುವ ಸಂದರ್ಭದಲ್ಲಿ ತುಳುಭಾಷೆ ಬಳಕೆ ಮಾಡುವುದಕ್ಕೆ ಕಾನೂನಿನ ನಿಯಾಮನುಸಾರ ಯಾವುದೇ ನಿರ್ಬಂಧ ಇರುವುದಿಲ್ಲ. ಅಲ್ಲದೆ ಪತ್ರದಲ್ಲಿ ತುಳು ಭಾಷೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೂ ವಿವಾದಕ್ಕೆ ಕಾರಣವಾಗುವ ಈ ಪತ್ರವನ್ನು ಕೂಡಲೇ ಜಿ.ಪಂ. ವಾಪಸ್‌ ಪಡೆಯಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ಆಗ್ರಹಿಸಿದ್ದರು.

ಪತ್ರ ಮುಖೇನ ಜಿ.ಪಂ. ಸ್ಪಷ್ಟನೆ:

ಈ ಪತ್ರ ವೈರಲ್‌ ಆಗುತ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿತು. ಕರಾವಳಿಯ ಸಂಸದರು, ಶಾಸಕರು ಹಾಗೂ ಸಂಘಸಂಸ್ಥೆಗಳ ಮುಖಂಡರು ಜಿ.ಪಂ. ಧೋರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಸ್ಪಷ್ಟನೆಯೊಂದಿಗೆ ವಾಪಸ್‌ ಪತ್ರ ಬರೆಯಲಾಗಿದೆ. ಮರು ಪತ್ರದಲ್ಲಿ, ಈ ಹಿಂದೆ ಎಲ್ಲಿಯೂ ತುಳು ಭಾಷೆ ಮಾತನಾಡಲು ನಿರ್ಬಂಧ ವಿಧಿಸಿಲ್ಲ ಎಂದು ಜಿ.ಪಂ. ಉಪ ಕಾರ್ಯದರ್ಶಿ ಜಯಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ.

---------------

-ತಾರಾನಾಥ ಗಟ್ಟಿ ಕಾಪಿಕಾಡ್‌, ಅಧ್ಯಕ್ಷರು, ತುಳು ಸಾಹಿತ್ಯ ಅಕಾಡೆಮಿ------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ