ಕನ್ನಡಪ್ರಭ ವಾರ್ತೆ ಸಾಗರ
ಪಹಣಿಯಲ್ಲಿ ಬೆಳೆ ನಮೂದಿಸಬೇಕು ಮತ್ತು ಪಹಣಿ ನಮೂದಿನಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರಾಂತ್ಯ ಅಡಕೆ ಬೆಳೆ ಗಾರರ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮತ್ತು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಅಡಕೆ ಬೆಳೆಗಾರರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಬೆಳೆವಿಮೆ ಮಾಡಿಸಲು ಜು.೩೧ ಕೊನೆಯ ದಿನಾಂಕ ಎಂದು ಘೋಷಣೆ ಮಾಡಲಾಗಿದೆ. ಆದರೆ ಪಹಣಿಯಲ್ಲಿ ಬೆಳೆ ನಮೂದು ಆಗದೆ ಇರುವು ದರಿಂದ ಅಡಕೆ ಬೆಳೆಗಾರರು ಬೆಳೆವಿಮೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಪಹಣಿಯಲ್ಲಿ ಅಡಕೆ ಹೊರತುಪಡಿಸಿ ಭತ್ತ ಇತರೆ ಬೆಳೆ ಎಂದು ನಮೂದು ಮಾಡ ಲಾಗುತ್ತಿದೆ. ಇನ್ನು ಕೆಲವು ಪಹಣಿಗಳಲ್ಲಿ ಬೆಳೆ ದಾಖಲಾಗುತ್ತಿಲ್ಲ ಎಂದು ದೂರಿದರು.
ಸಾಗರ, ಸೊರಬ, ಹೊಸನಗರ ಭಾಗಗಳಲ್ಲಿ ಅಡಕೆ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರ ಪಹಣಿಯಲ್ಲಿ ಅಡಕೆ ಬೆಳೆ ಎಂದು ನಮೂದಾಗದೆ ಹೋದಲ್ಲಿ ವಿಮಾ ಸೌಲಭ್ಯ ಸೇರಿದಂತೆ ಸರ್ಕಾರದ ಯಾವ ಸೌಲಭ್ಯವೂ ಪಡೆಯಲು ಸಾಧ್ಯವಿಲ್ಲ. ಜು.೨೫ರೊಳಗೆ ತಂತ್ರಜ್ಞಾನವನ್ನು ಸರಿಪಡಿಸಿ ಬೆಳೆಗಾರರಿಗೆ ನೀಡುವ ಪಹಣಿಯಲ್ಲಿ ಅಡಕೆ ಬೆಳೆಯನ್ನು ನಮೂದು ಮಾಡಬೇಕು. ಇಲ್ಲವಾದಲ್ಲಿ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿ ಕೊಳ್ಳುವ ಎಚ್ಚರಿಕೆ ನೀಡಿದರು.ತೋಟಗರ್ಸ್ ಸಹಕಾರಿ ಸಂಸ್ಥೆ ಅಧ್ಯಕ್ಷ ಕೆ.ಸಿ.ದೇವಪ್ಪ ಮಾತನಾಡಿ, ಪಹಣಿಯಲ್ಲಿ ಬೆಳೆ ನಮೂದು ಮಾಡದೆ ಹೋದಲ್ಲಿ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ತಹಶೀಲ್ದಾರ್ ಕಚೇರಿಗೆ, ಉಪವಿಭಾಗಾಧಿಕಾರಿಗಳ ಕಚೇರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ. ತಂತ್ರಾಂಶ ಲೋಪ ದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.
ಸಂಘದ ಈಳಿ ಶ್ರೀಧರ್ ಮಾತನಾಡಿ, ಬೆಳೆ ವಿಮೆ ಸರಿಯಾಗಿ ನಮೂದು ಮಾಡದೆ ಇರುವುದರಿಂದ ಬೆಳೆನಷ್ಟ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಸರ್ಕಾರದಿಂದ ಸಬ್ಸಿಡಿಯನ್ನು ಸಹ ಪಡೆಯಲು ಸಾಧ್ಯ ವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಶರಾವತಿ ಸಿ.ರಾವ್, ಕೆ.ವಿ.ಪ್ರವೀಣ್, ಯು.ಎಚ್.ರಾಮಪ್ಪ, ರಾಜೇಂದ್ರ ಖಂಡಿಕಾ, ನಾಗಾನಂದ, ರಮೇಶ್ ಪಂಡ್ರಿ, ಶ್ರೀಕಾಂತ್, ಕೃಷ್ಣಮೂರ್ತಿ, ವೆಂಕಟಗಿರಿ ಇನ್ನಿತರರು ಹಾಜರಿದ್ದರು.