ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೇಮಾವತಿ ಬಡಾವಣೆಯ 582 ನಿವೇಶನಗಳ ಸಕ್ರಮಾತಿಗೆ ಪ್ರಯತ್ನಿಸುತ್ತಿರುವ ಶಾಸಕ ಎಚ್.ಟಿ.ಮಂಜು ಬಡಾವಣೆಯ ನಿವೇಶನದಾರರ ಸಂಘದ ನಿಯೋಗದೊಂದಿಗೆ ರಾಜ್ಯ ಪೌರಾಡಳಿತ ಸಚಿವ ರಹೀಂಖಾನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಅಕ್ರಮ-ಸಕ್ರಮಕ್ಕೆ ಮನವಿ ಮಾಡಿದರು.ಹೇಮಾವತಿ ಬಡಾವಣೆಯ ಅಕ್ರಮ-ಸಕ್ರಮ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಪ್ರಸ್ತಾಪಿಸಿದ್ದ ಶಾಸಕ ಮಂಜು ಇದೀಗ ಬಡಾವಣೆ ನಿವಾಸಿಗಳ ಸಂಘದ ಸದಸ್ಯರೊಂದಿಗೆ ಪೌರಾಡಳಿತ ಸಚಿವ ರಹೀಂಖಾನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ವಿಧಾನ ಸೌಧದ ಸಚಿವಾಲಯದ ಕಚೇರಿಯಲ್ಲಿ ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದರು.
ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆ 51.30 ಎಕರೆ ಭೂಮಿಯನ್ನು ನಿಯಮಾನುಸಾರ ರೈತರಿಂದ ಭೂ ಸ್ವಾಧೀನ ಮಾಡಿಕೊಂಡು ಹೇಮಾವತಿ ಬಡಾವಣೆಯ ವಸತಿ ವಿನ್ಯಾಸ ನಕ್ಷೆ ಸಿದ್ಧಪಡಿಸಿ 1,276 ನಿವೇಶನ ಹಂಚಿಕೆ ಮಾಡಿತ್ತು. ಆದರೆ, 1985 ರಿಂದ 2002ರ ಅವಧಿಯಲ್ಲಿ ನಡೆದ ನಿವೇಶನ ಹಂಚಿಕೆ ಪ್ರಕ್ರಿಯೆ ನಿಯಮಾನುಸಾರ ನಡೆದಿಲ್ಲ. ನಿಯಮ ಮೀರಿ ಅಕ್ರಮವಾಗಿ ನಿವೇಶನ ಹಂಚಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆಗೆ ಒಳಪಡಿಸಲಾಗಿತ್ತು.ತನಿಖೆ ನಂತರ ಲೋಕಾಯುಕ್ತರು ಸರ್ಕಾರಕ್ಕೆ ಸಮಗ್ರ ವರದಿ ನೀಡಿದ್ದರು. 2022ರಲ್ಲಿ ಬಿಜೆಪಿ ಸರ್ಕಾರ ದಿ.ಕೆ.ಎನ್. ಕೇಂಗೇಗೌಡರ ಕಾಲದಲ್ಲಿ ಹಂಚಿಕೆಯಾಗಿದ್ದ 515 ನಿವೇಶನಗಳು ಸೇರಿ ಒಟ್ಟು 694 ನಿವೇಶನಗಳನ್ನು ಸಕ್ರಮಗೊಳಿಸಿ ಆದೇಶಿಸಿತ್ತು. ಉಳಿದ 582 ನಿವೇಶನಗಳನ್ನು ಅಕ್ರಮವೆಂದು ತೀರ್ಮಾನಿಸಲಾಗಿತ್ತು.
ಅಕ್ರಮ-ಸಕ್ರಮದಲ್ಲಿ ತಾರತಮ್ಯ ನೀತಿ ಅನುಸರಿದ ಬಿಜೆಪಿ ಸರ್ಕಾರದ ಪಕ್ಷ ರಾಜಕಾರಣದಿಂದ ಬಡಾವಣೆಯಲ್ಲಿ ಈಗಾಗಲೇ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ 582 ನಿವೇಶನಗಳ ವಾರಸುದಾರರ ಬದುಕು ಆತಂಕಕ್ಕೆ ಸಿಲುಕಿತ್ತು.ಈ ಸಮಸ್ಯೆ ಪರಿಹರಿಸಲು ಮುಂದಾಗಿರುವ ಶಾಸಕ ಎಚ್.ಟಿ.ಮಂಜು ಪೌರಾಡಳಿತ ಸಚಿವರಿಂದ ಸದನದಲ್ಲಿ ಸಕಾರಾತ್ಮಕ ಉತ್ತರ ಪಡೆದಿದ್ದರು. ಈಗ ಬಡಾವಣೆ ನಿವೇಶನದಾರರ ಸಂಘದ ಸದಸ್ಯರ ನಿಯೋಗದೊಂದಿಗೆ ರಾಜ್ಯ ಪೌರಾಡಳಿತ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಶಾಸಕರು ಒತ್ತಾಯಿಸಿದ್ದಾರೆ.
ಬಡಾವಣೆಯಲ್ಲಿ ನಿವೇಶನಗಳನ್ನು ಸಕ್ರಮಗೊಳಿಸಿದರೆ ಪುರಸಭೆಗೆ ಆದಾಯ ಬರುತ್ತದೆ. ಬಡಾವಣೆಯಲ್ಲಿ ಸರ್ವ ಪಕ್ಷಕ್ಕೆ ಸೇರಿದ ಜನರೂ ಸಾಲಸೋಲ ಮಾಡಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಬಡವರ ವಿಚಾರದಲ್ಲಿ ನಾವು ಪಕ್ಷ ರಾಜಕಾರಣ ಮಾಡುವುದು ಬೇಡ ಎನ್ನುವುದನ್ನು ಸಚಿವ ದ್ವಯರಿಗೆ ಶಾಸಕ ಎಚ್.ಟಿ.ಮಂಜು ಮನವರಿಕೆ ಮಾಡಿ 582 ನಿವೇಶನಗಳನ್ನು ಸಕ್ರಮಗೊಳಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡುವಂತೆ ಮನವಿ ಮಾಡಿದರು.ನಿಯೋಗದ ಅಹವಾಲು ಆಲಿಸಿದ ಸಚಿವರಾದ ರಹೀಂಖಾನ್ ಮತ್ತು ಎನ್.ಚಲುವರಾಯಸ್ವಾಮಿ ಸಮಸ್ಯೆಯ ಪರಿಹಾರದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ನಿಯೋಗದ ಸದಸ್ಯರೊಂದಿಗೆ ಮಾತನಾಡಿದ ರಾಜ್ಯ ಪೌರಾಡಳಿತ ಸಚಿವ ರಹೀಂಖಾನ್, ರಾಜ್ಯದೆಲ್ಲೆಡೆ ಬಲಾಢ್ಯರ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ. ಆದರೆ, ಬಡವರು ಮಾತ್ರ ತೊಂದರೆಗೆ ಸಿಲುಕಿದ್ದಾರೆ. ಬಡವರ ನಿವೇಶನಗಳ ಸಮಸ್ಯೆಯ ಪರಿಹಾರಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಹಕ್ಕುಪತ್ರ ಹೊಂದಿರುವ ರಾಜ್ಯದ ಎಲ್ಲಾ ಬಡವರ ನಿವೇಶನಗಳ ಹಾಗೂ ಮನೆಗಳ ಸಕ್ರಮಾತಿಗೆ ನಾನು ಕ್ರಮವಹಿಸಲಿದ್ದೇನೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ಬಡವರ ವಿಚಾರದಲ್ಲಿ ನಾನು ಎಂದಿಗೂ ಪಕ್ಷ ರಾಜಕಾರಣ ಮಾಡುವುದಿಲ್ಲ. ಹೇಮಾವತಿ ಬಡಾವಣೆಯ ಉಳಿದ 582 ನಿವೇಶನಗಳ ಸಕ್ರಮಕ್ಕೆ ನಾನು ಕೈಜೋಡಿಸಿ ಕೆಲಸ ಮಾಡುವುದಾಗಿ ನಿಯೋಗಕ್ಕೆ ತಿಳಿಸಿದರು.
ಈ ವೇಳೆ ಶಾಸಕರೊಂದಿಗೆ ಜೊತೆ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಂ, ಹೇಮಾವತಿ ಬಡಾವಣೆ ನಿವೇಶನದಾರರ ಸಂಘದ ಅಧ್ಯಕ್ಷ ವಿ.ಡಿ.ಹರೀಶ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್, ಮುಖಂಡರಾದ ಎಸ್.ಬಿ.ಟಿ ಬಸ್ ಮಂಜಣ್ಣ, ಬಿ.ನಂಜಪ್ಪ, ನಿವೃತ್ತ ಶಿಕ್ಷಕರಾದ ನಿಂಗೇಗೌಡ, ನಾಯಸಿಂಗನಹಳ್ಳಿ ನಾಗರಾಜು, ಸಿಂಗನಹಳ್ಳಿ ನಾಗರಾಜು ಸೇರಿದಂತೆ ಹಲವರಿದ್ದರು.