ಭದ್ರಾ ಮೇಲ್ದಂಡೆಗೆ 5300 ಕೋಟಿ ರು.ಬಿಡುಗಡೆಗೆ ಕೇಂದ್ರಕ್ಕೆ ಪತ್ರ

KannadaprabhaNewsNetwork |  
Published : Jun 22, 2024, 12:52 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗ, ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ಘೋಷಿತ 5300 ಕೋಟಿ ರು . ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಮರು ಕೋರಿಕೆ ಪತ್ರ ಬರೆದಿರುವುದಾಗಿ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಫಕೀರಪ್ಪ ಹರಿಶ್ಚಂದ್ರ ಲಮಾಣಿ ಹೇಳಿದರು.

ಭದ್ರಾ ಮೇಲ್ದಂಡೆ ನೂತನ ಮುಖ್ಯ ಇಂಜಿನಿಯರ್ ಎಫ್.ಎಚ್. ಲಮಾಣಿ ಮಾಹಿತಿ

ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮರು ಕೋರಿಕೆ ಪತ್ರ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ಘೋಷಿತ 5300 ಕೋಟಿ ರು . ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಮರು ಕೋರಿಕೆ ಪತ್ರ ಬರೆದಿರುವುದಾಗಿ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಫಕೀರಪ್ಪ ಹರಿಶ್ಚಂದ್ರ ಲಮಾಣಿ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಆಗಿ ನೂತನವಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಮಾತನಾಡಿದ ಅವರು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಮೂಲಕ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ನಿರ್ಮಲಾ ಸೀತರಾಮನ್ ಅವರಿಗೆ ಪತ್ರ ಬರೆಯಲಾಗಿದೆ. ಲೋಕಸಭೆ ಸದಸ್ಯ ಗೋವಿಂದ ಕಾರಜೋಳ ಕೂಡಾ ಈ ಸಂಬಂಧ ಪ್ರತ್ಯೇಕ ಪತ್ರ ಬರೆದು ಕೇಂದ್ರದ ಮೇಲೆ ಒತ್ತಡ ಹೇರಲಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಿಂಚಾಯಿ ಯೋಜನೆ ಅಥವಾ ಎಐಬಿಪಿ ಯಾವುದರಲ್ಲಾದರೂ ಅನುದಾನ ಒದಗಿಸುವಂತೆ ವಿನಂತಿ ಮಾಡಲಾಗಿದೆ ಎಂದರು.

ಭದ್ರಾ ಮೇಲ್ದಂಡೆ ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಏತ ನೀರಾವರಿ ಯೋಜನೆ. ತುಂಗಾದಿಂದ ಭದ್ರಾಗೆ ಮೊದಲ ಹಂತದಲ್ಲಿ 17.40 ಟಿಎಂಸಿ ನೀರು ಮತ್ತು ಭದ್ರಾ ಜಲಾಶಯದಿಂದ ಎರಡನೇ ಹಂತದಲ್ಲಿ 29.90 ಟಿಎಂಸಿ ನೀರನ್ನು ಎತ್ತುವ ಮೂಲಕ ಬರಪೀಡಿತ ಜಿಲ್ಲೆಗಳಾದ ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಸೂಕ್ಷ್ಮ ನೀರಾವರಿ ಮೂಲಕ 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಯೋಜಿಸಲಾಗಿದೆ. ಬರಪೀಡಿತ 367 ಕೆರೆಗಳನ್ನು ತುಂಬಿಸುವ ಮೂಲಕ ಕುಡಿವ ನೀರನ್ನು ಒದಗಿಸಲಾಗುತ್ತಿದೆ ಎಂಬ ಸಂಗತಿಯನ್ನು ಪತ್ರದಲ್ಲಿ ವಿವರಿಸಲಾಗಿದೆ ಎಂದು ಅವರು ಹೇಳಿದರು.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಸಂಬಂಧದ ಎಲ್ಲ ಪೂರ್ವ ಸಿದ್ದತೆಗಳು ಪೂರ್ಣಗೊಳಿಸಿ ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಲಾಗಿದೆ. 16-12-2020 ರಲ್ಲಿ ರು.21,473 ಕೋಟಿ ವೆಚ್ಚದ ಪರಿಷ್ಕೃತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಯೋಜನೆಯ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆಯನ್ನು ಅಂಗೀಕರಿಸಲಾಗಿದೆ. 24.12.2020 ರಂದು ನಡೆದ ಕೇಂದ್ರ ಜಲ ಶಕ್ತಿ ಸಚಿವಾಲಯದ ಸಲಹಾ ಸಮಿತಿ ಸಭೆ, 25-03-2021 ರಂದು ನಡೆದ ಹೂಡಿಕೆ ಒಪ್ಪಿಗೆ ಸಮಿತಿ ಸಭೆಯಲ್ಲಿ ರು.16,125.48 ಕೋಟಿ ಮೊತ್ತದ ಭದ್ರಾ ಮೇಲ್ದಂಡೆ ಯೋಜನೆ ಹೂಡಿಕೆ ತೆರವು ಪ್ರಸ್ತಾವನೆ ಕೂಡಾ ಅಂಗೀಕರಿಸಲಾಗಿದೆ.

ಜಲ ಶಕ್ತಿ ಸಚಿವಾಲಯ ಹೊರಡಿಸಿದ ರಾಷ್ಟ್ರೀಯ ಯೋಜನೆಯ ಅನುಷ್ಠಾನದ ಮಾರ್ಗಸೂಚಿಗಳ ಪ್ರಕಾರ, ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಲ್ಲಿ ಸೇರ್ಪಡೆಗೊಳ್ಳಲು ಅರ್ಹವಾಗಿದೆ. 15-02-2022 ರಂದು ನಡೆದ ಹೈಪವರ್ಡ್ ಸ್ಟೀರಿಂಗ್ ಕಮಿಟಿ (ಎಚ್‌ಪಿಎಸ್‌ಸಿ) ಸಭೆಯ ಮುಂದೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಸೇರಿಸುವ ಪ್ರಸ್ತಾವನೆ ಇರಿಸಲಾಗಿದೆ. ಭಾರತ ಸರ್ಕಾರದ ಹಣಕಾಸು ಕಾರ್ಯದರ್ಶಿ ಅವರು 12.10.2022 ರಂದು ನಡೆದ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಲ್ಲಿ ಸೇರಿಸಲು ಶಿಫಾರಸು ಮಾಡಿರುವುದ ಪತ್ರದಲ್ಲಿ ನೆನಪು ಮಾಡಲಾಗಿದೆ..

2023-24 ನೇ ಸಾಲಿನ ಕೇಂದ್ರ ಬಜೆಟ್ ಭಾಷಣದ ಸಮಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರು.5300 ಕೋಟಿ ಘೋಷಿಸಲಾಗಿದ್ದು ಅನುದಾನ ಬಿಡುಗಡೆಯಾಗಿಲ್ಲ. ಕಾಮಗಾರಿ ಚುರುಕುಗೊಳಿಸಲು, ರೈತರ ಹಿತಾಸಕ್ತಿ ಕಾಪಾಡಲು ಕೇಂದ್ರದ ನೆರವು ಅಗತ್ಯ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ - ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (PMKSY-AIBP) ಯೋಜನೆ ಅಡಿಯಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ರು. ಅನುದಾನ ಬಿಡುಗಡೆ ಮಾಡುವಂತೆ ಪತ್ರದಲ್ಲಿ ಕೋರಲಾಗಿದೆ ಎಂದು ಲಮಾಣಿ ಮಾಹಿತಿ ನೀಡಿದರು.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಈ ವೇಳೆ ಉಪಸ್ಥಿತರಿದ್ದರು.-----------

ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡ ಎಫ್.ಎಚ್.ಲಮಾಣಿ ಅವರನ್ನು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಗೌರವಿಸಲಾಯಿತು.--21ಸಿಟಿಡಿ6

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ