ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆತಾಲೂಕಿನ ವಿವಿಧ ಗ್ರಾಮಗಳಿಗೆ ಮತ್ತು ಪಟ್ಟಣಕ್ಕೆ ಕುಡಿವ ನೀರು ಸರಬರಾಜಿನ ಅವಶ್ಯಕತೆ ಇರುವುದರಿಂದ ಗೊರೂರಿನ ಹೇಮಾವತಿ ಜಲಾಶಯದಿಂದ ಮುಂದಿನ 15 ದಿನಗಳ ಕಾಲ ನಿತ್ಯ 1500 ಕ್ಯುಸೆಕ್ ನೀರನ್ನು ಹೇಮಾವತಿ ನದಿಗೆ ಹರಿಸುವಂತೆ ಪಟ್ಟಣದ ಹೇಮಾವತಿ ಎಡದಂಡೆ ನಾಲಾ ವಿಭಾಗ ನಂ.03 ರ ಕಾರ್ಯಪಾಲಕ ಅಭಿಯಂತರರು ಹೇಮಾವತಿ ನಾಲಾ ವ್ಯಾಪ್ತಿಯ ಚನ್ನರಾಯಪಟ್ಟಣ ವೃತ್ತದ ಅಧೀಕ್ಷಕ ಎಂಜಿನಿಯರ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕುಡಿವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ನದಿಗೆ ನೀರು ಹರಿಸುವಂತೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರ ಟಿಪ್ಪಣಿ ಪತ್ರವನ್ನು ಉಲ್ಲೆಖಿಸಿರುವ ಕಾರ್ಯಪಾಲಕ ಅಭಿಯಂತರ ಕಿಝರ್ ಅಹಮದ್ ತಾಲೂಕಿನಲ್ಲಿ ಸಾರ್ವಜನಿಕರು ಮತ್ತು ಜನ ಜಾನುವಾರುಗಳಿಗೆ ಕುಡಿವ ನೀರಿನ ತೀವ್ರ ಅಭಾವವಿದೆ ಎಂದು ತಿಳಿಸಿದ್ದಾರೆ.ಹೇಮಾವತಿ ನದಿಯಲ್ಲಿ ನೀರು ಹರಿಯುವಿಕೆ ಪ್ರಮಾಣ ಕುಸಿದಿರುವುದರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಿಸಿದ ಹೇಮಗಿರಿ ಅಣೆಕಟ್ಟೆ ಬಳಿಯ ತಾಲೂಕಿನ ಅಕ್ಕಿಹೆಬ್ಬಾಳು ಹಾಗೂ ಇತರೆ 25 ಗ್ರಾಮಗಳಿಗೆ ಮತ್ತು ಬೂಕನಕೆರೆ ಹೋಬಳಿಯ 21 ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮಾಡುವ ಪಿ.ಡಿ.ಜಿ ಕೊಪ್ಪಲು ಬಳಿಯ ಬಹುಗ್ರಾಮ ಕುಡಿಯುವ ನೀರು ಪೂರೈಕೆಗಳಿಗೆ ತುರ್ತು ನೀರಿನ ಅಗತ್ಯವಿದೆ ಎಂದು ಹೇಳಿದ್ದಾರೆ.
ಜೊತೆಗೆ ಹೇಮಾವತಿ ನದಿಯಲ್ಲಿ ನೀರು ಹರಿಯುವಿಕೆಯ ಪ್ರಮಾಣ ಕುಸಿದಿರುವುದರಿಂದ ಕೆ.ಆರ್.ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಹೇಮಗಿರಿ ಬಳಿಯ ಪಟ್ಟಣ ನೀರು ಸರಬರಾಜು ಘಟಕಕ್ಕೂ ಆತಂಕ ಎದುರಾಗಿದೆ. ತಾಲೂಕಿನ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ತುರ್ತಾಗಿ ಹೇಮಾವತಿ ಜಲಾಶಯದಿಂದ ಹೇಮಾವತಿ ನದಿಗೆ ನೀರು ಹರಿಸುವಂತೆ ಶಾಸಕ ಎಚ್.ಟಿ.ಮಂಜು ಮನವಿ ಮಾಡಿದ್ದಾರೆ.ತಾಲೂಕಿನ ಜನರ ಹಿತದೃಷ್ಠಿಯಿಂದ ಹೇಮಾವತಿ ಜಲಾಶಯದಿಂದ ಮುಂದಿನ 15 ದಿನಗಳ ಕಾಲ ನಿತ್ಯ 1500 ಕ್ಯುಸೆಕ್ ನೀರು ನದಿಗೆ ಬಿಡುವಂತೆ ಮೇಲಾಧಿಕಾರಿಗಳಿಗೆ ಹೇಮಾವತಿ ನಾಲೆ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.