ರೈತರ ಸಾಲದ ಒನ್‌ಟೈಮ್‌ ಸೆಟಲ್‌ಮೆಂಟ್‌ ಕುರಿತು ಪ್ರಧಾನಿಗಳಿಗೂ ಪತ್ರ ಬರೆದಿದ್ದೇನೆ - ರಮೇಶ ಜಿಗಜಿಣಗಿ

KannadaprabhaNewsNetwork |  
Published : Aug 19, 2024, 12:51 AM ISTUpdated : Aug 19, 2024, 10:11 AM IST
18ಐಎನ್‌ಡಿ2,ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಅಥರ್ಗಾ ಗ್ರಾಮೀಣ ಸಹಕಾರಿ ಸಂಘದ ಉದ್ಘಾಟನೆಯನ್ನು ಸಂಸದ ರಮೇಶ ಜಿಗಜಿಣಗಿ ನೆರವೇರಿಸಿದರು.  | Kannada Prabha

ಸಾರಾಂಶ

ರೈತರ ಸಾಲದ ಒನ್‌ಟೈಮ್‌ ಸೆಟಲ್‌ಮೆಂಟ್‌ ಕುರಿತು ಪ್ರಧಾನಿಗಳಿಗೂ ಪತ್ರ ಬರೆದಿದ್ದೇನೆ. 3 ವರ್ಷದಿಂದ ಈ ಕುರಿತು ಪ್ರಯತ್ನ ಮಾಡುತ್ತಿದ್ದೇನೆ -  ಸಂಸದ ರಮೇಶ ಜಿಗಜಿಣಗಿ ಪ್ರಶ್ನಿಸಿದರು.

 ಇಂಡಿ :  ರೈತರ ಸಾಲದ ಒನ್‌ಟೈಮ್‌ ಸೆಟಲ್‌ಮೆಂಟ್‌ ಕುರಿತು ಪ್ರಧಾನಿಗಳಿಗೂ ಪತ್ರ ಬರೆದಿದ್ದೇನೆ. 3 ವರ್ಷದಿಂದ ಈ ಕುರಿತು ಪ್ರಯತ್ನ ಮಾಡುತ್ತಿದ್ದೇನೆ. ಇಂಡಸ್ಟ್ರೀಯಲ್‌ ಮಾಡುವವರಿಗೆ ಬಡ್ಡಿ ಮನ್ನಾ ಮಾಡುತ್ತಿರಿ, ರೈತರು ತೆಗೆದುಕೊಂಡು ಸಾಲದ ಬಡ್ಡಿ ಮನ್ನಾ ಮಾಡಿ ಅವರಿಗೆ ಸಾಲ ಕೊಡುವುದಿಲ್ಲ ಎಂದರೇ ಯಾವ ನ್ಯಾಯ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಶ್ನಿಸಿದರು.

ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಭಾನುವಾರ ಅಥರ್ಗಾ ಗ್ರಾಮೀಣ ಸಹಕಾರಿ ಸಂಘದ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಈ ಕುರಿತು ಪ್ರಧಾನಮಂತ್ರಿಗಳಿಗೂ ಪತ್ರ ಬರೆದಿದ್ದೇನೆ ಹಾಗೂ ಆರ್ಥಿಕ ಸಚಿವರ ಮೇಲೆಯೂ ಒತ್ತಡ ತಂದಿದ್ದೇನೆ. ಈಡಿ ದೇಶದಲ್ಲಿ ಯಾರೂ ಒನ್‌ಟೈಮ್‌ ಸೆಟಲ್‌ಮೆಂಟ್‌ ಸಾಲದ ಕುರಿತು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದಿಲ್ಲ. ನಾನು ಪತ್ರ ಬರೆದಿದ್ದೇನೆ. ಇನ್ನೂ 4 ವರ್ಷ ಅವಧಿ ಇದೆ. ಅಷ್ಟರೊಳಗೆ ಇದಕ್ಕೊಂದು ತೀರ್ಮಾನ ಕಂಡುಕೊಳ್ಳುತ್ತೇನೆ. ಒನ್‌ ಟೈಮ್‌ ಸೆಟಲಮೆಂಟ್‌ ಮಾಡಿಕೊಂಡ ರೈತರಿಗೆ ಪುನಃ ಸಾಲ ನೀಡುವಂತೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಾನು 40 ವರ್ಷ ರಾಜಕಾರಣ ಮಾಡಿದರೂ ಇಂಡಿ ತಾಲೂಕಿನ ಯಾರಿಗೂ ನಾನು ಅನ್ಯಾಯ ಮಾಡಿರುವುದಿಲ್ಲ. ಯಾರ ಮನಸ್ಸು ನೊಯಿಸಿರುವುದಿಲ್ಲ. ಕೆಲವೊಬ್ಬರು ಉದ್ದೂದ್ದ ಅಂಗಿ ಹಾಕಿಕೊಂಡವರು ಹೇಳುತ್ತಾರೆ. ನಮ್ಮ ಜಾತಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಜಾತಿಗೂ ಏನೂ ಮಾಡಿಲ್ಲ ಎಂದು ಹೇಳುತ್ತಾರೆ. ಆದರೆ, ನನಗೆ ಜಾತಿ ಎಂಬುವುದು ಗೊತ್ತಿಲ್ಲ. ಯಾರೂ ಹಿಂತವರ ಹೇಳಿಕೆಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ನಾನು ಜಾತಿ ಮಾಡುವಷ್ಟು ಸಣ್ಣ ಮನಸ್ಸಿನ ಮನುಷ್ಯನಲ್ಲ. ಇಂಡಿ ತಾಲೂಕಿನ ಕೆಲಸಕ್ಕಾಗಿ ಚಪ್ಪಲಿ ಹರಿದುಕೊಂಡು ಕೆಲಸ ಮಾಡಿದ್ದೇನೆ. ಹಿಂದೆಯೂ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ನನ್ನ ಹೆಸರಿನಲ್ಲಿ ಯಾವುದೇ ಸಂಸ್ಥೆ ಇಲ್ಲ, ಬೆಳಗ್ಗೆ ಎದ್ದಕೂಡಲೇ ಸಾರ್ವಜನಿಕರ ಕೆಲಸ ಮಾಡುವುದು ಅಷ್ಟೇ ಎಂದು ತಿಳಿಸಿದರು.

40 ವರ್ಷಗಳ ಕಾಲ ಜಿಲ್ಲೆಯಲ್ಲಿ ಒಬ್ಬ ದಲಿತ ಮನುಷ್ಯ ಇಷ್ಟು ವರ್ಷ ಸುಧೀರ್ಘ ರಾಜಕಾರಣ ಮಾಡುವುದು ಸುಲಭವಲ್ಲ. ನಾನು ಬಸವಣ್ಣನವರ ತತ್ವದ ಮಾರ್ಗದಲ್ಲಿ ನಡೆದು ಸಣ್ಣವರು, ದೊಡ್ಡವರಿಗೂ ಗೌರವದಿಂದ ಕಾಣುತ್ತ ರಾಜಕಾರಣ ಮಾಡಿದ್ದೇನೆ. ಈ ಬಾರಿಯೂ ನನಗೆ ಜಿಲ್ಲೆಯ ಜನರು ಆಶೀರ್ವಾದ ಮಾಡಿ ಆಯ್ಕೆ ಮಾಡಿದ್ದಾರೆ ಎಂದರು.

ಮಾಜಿ ಎಂಎಲ್ಸಿ ಅರುಣ ಶಹಾಪೂರ, ಸಂಸ್ಥೆಯ ಅಧ್ಯಕ್ಷ ನಾಗುಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿನವ ಪುಂಡಲಿಂಗ ಮಹಾಶೀವಯೋಗಿಗಳು, ಗಿರಿಜಾಮಾತಾ ತಾಯಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ರವಿ ವಗ್ಗೆ(ಭುಯ್ಯಾರ), ಅಣ್ಣಪ್ಪಸಾಹುಕಾರ ಖೈನೂರ, ಶೀಲವಂತ ಉಮರಾಣಿ ಮೊದಲಾದವರು ಇದ್ದರು.

ಕೋಟ್‌...ನಾನುಗೌಡ ಪಾಟೀಲ ಅವರು ಹಿರೇರೂಗಿ ಗ್ರಾಮದಲ್ಲಿ ಸಹಕಾರಿ ಸಂಸ್ಥೆ ಸ್ಥಾಪಿಸಿದ್ದು ಸಂತಸದ ಸಂಗತಿ. ಸಂಸ್ಥೆಯ ಬೆಳವಣಿಗೆಯಲ್ಲಿ ನಾನು ಹಿಂಬದಿಯಲ್ಲಿ ನಿಂತು ಸಹಕಾರ ನೀಡುತ್ತೇನೆ. ಸಮಾಜದಲ್ಲಿ ಇಂಥ ಸಂಸ್ಥೆಗಳು ಬೆಳೆಯಬೇಕು. ರಾಷ್ಟ್ರೀಕೃತ ಬ್ಯಾಂಕುಗಳು ಬಡವರಿಗೆ ಸಾಲ ಕೊಡುವುದು ವಿರಳ. ಇಂಥ ಸಹಕಾರಿ ಸಂಸ್ಥೆಗಳು ಬಡವರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ.

-ರಮೇಶ ಜಿಗಜಿಣಗಿ, ಸಂಸದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ