ರುದ್ರಣ್ಣ ಪ್ರಕರಣ ಸಿಬಿಐ ತನಿಖೆಗೆ ರಾಷ್ಟ್ರಪತಿ, ಪಿಎಂ ಕಚೇರಿಗೆ ಪತ್ರ

KannadaprabhaNewsNetwork |  
Published : Nov 26, 2024, 12:47 AM IST

ಸಾರಾಂಶ

ಬೆಳಗಾವಿಯ ತಹಸೀಲ್ದಾರ್‌ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತ) ಎಸ್‌ಡಿಎ ರುದ್ರಣ್ಣ ಯಡವನ್ನವರ ಆತ್ಮಹತ್ಯೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ. ಹೀಗಾಗಿ ಇದೀಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಕೋರಿ ತಹಸೀಲ್ದಾರ್‌ ಕಚೇರಿಯ ಅನಾಮಿಕರೊಬ್ಬರು ರಾಷ್ಟ್ರಪತಿ, ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ. ಹಾಗಾಗಿ, ಈ ಪ್ರಕರಣ ಈಗ ರಾಷ್ಟ್ರಪತಿ, ಪ್ರಧಾನಿ ಅಂಗಳಕ್ಕೂ ಹೋದಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯ ತಹಸೀಲ್ದಾರ್‌ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತ) ಎಸ್‌ಡಿಎ ರುದ್ರಣ್ಣ ಯಡವನ್ನವರ ಆತ್ಮಹತ್ಯೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ. ಹೀಗಾಗಿ ಇದೀಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಕೋರಿ ತಹಸೀಲ್ದಾರ್‌ ಕಚೇರಿಯ ಅನಾಮಿಕರೊಬ್ಬರು ರಾಷ್ಟ್ರಪತಿ, ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ. ಹಾಗಾಗಿ, ಈ ಪ್ರಕರಣ ಈಗ ರಾಷ್ಟ್ರಪತಿ, ಪ್ರಧಾನಿ ಅಂಗಳಕ್ಕೂ ಹೋದಂತಾಗಿದೆ.

ಬೆಳಗಾವಿ ತಹಸೀಲ್ದಾರ್‌ ಕಚೇರಯಲ್ಲಿ 2024, ನ.5ರಂದು ಎಸ್‌ಡಿಸಿ ರುದ್ರಣ್ಣ ಯಡವನ್ನವರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಪ್ತ ಕಾರ್ಯದರ್ಶಿ ಸೋಮು ದೊಡವಾಡಿ, ತಹಸೀಲ್ದಾರ್‌ ಬಸವರಾಜ ನಾಗರಾಳ ಮತ್ತು ಎಫ್‌ಡಿಸಿ ಅಶೋಕ ಕಬ್ಬಲಿಗೇರ ಕಿರುಕುಳವೇ ಕಾರಣ ಎಂದು ವ್ಯಾಟ್ಸಪ್‌ ಗ್ರೂಪ್‌ನಲ್ಲಿ ಉಲ್ಲೇಖಿಸಿ, ಬಳಿಕ ರುದ್ರಣ್ಣ ಆತ್ಮಹತ್ಯೆಗೆ ಶರಣಾಗಿದ್ದ. ಈ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿತ್ತು. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ಈಗ ಈ ತನಿಖೆ ದಾರಿ ತಪ್ಪುತ್ತಿದೆ ಎಂಬ ಆತಂಕ ಬೆಳಗಾವಿ ತಹಸೀಲ್ದಾರ್‌ ಕಚೇರಿ ಸಿಬ್ಬಂದಿಯದ್ದು. ಹಾಗಾಗಿ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡುವಂತೆ ಕೋರಿ ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ, ಸಿಎಂ ಮತ್ತು ಗೃಹ ಸಚಿವರು, ವಿಪಕ್ಷ ನಾಯಕರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ಪತ್ರದಲ್ಲಿ ಯಾವ ಸಿಬ್ಬಂದಿಯ ಹೆಸರನ್ನೂ ಉಲ್ಲೇಖಿಸಿಲ್ಲ. ಇದು ಕೂಡ ಅನಾಮಧೇಯ ಪತ್ರವಾಗಿದೆ.ಈ ಪತ್ರಿದಲ್ಲಿ ಏನು ಬರೆದಿದ್ದಾರೆ?:

ರುದ್ರಣ್ಣ ಸಾವಿಗೆ ಕಾರಣರಾದ ತಹಸೀಲ್ದಾರ್ ಬಸವರಾಜ್ ನಾಗರಾಳಗೆ ಕೆಲ ಸಿಬ್ಬಂದಿ ಸಹಾಯ ಮಾಡುತ್ತಿದ್ದಾರೆ. ಅಲ್ಲದೇ, ವಿಚಾರಣೆ ವೇಳೆ ತಹಸೀಲ್ದಾರ್‌ ವಿರುದ್ಧ ಹೇಳಿಕೆ ನೀಡದಂತೆ ಅಧಿಕಾರಿಗಳ ಮೇಲೆ ತೀವ್ರ ಒತ್ತಡವನ್ನೂ ಹೇರಲಾಗುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳಾದ ಎಸ್‌.ಪಿ.ಶಿಂಧೆ, ಕಿರಣ್ ತೋರಗಲ್, ಬಸಗೌಡ ಪಾಟೀಲ, ಬೆಳಗಾವಿ ತಹಸೀಲ್ದಾರ್ ಕಚೇರಿಯ ಎಸ್‌ಡಿಸಿ ಸುರೇಖಾ ನೇರ್ಲಿ ಮೂಲಕ ಇತರೆ ಸಿಬ್ಬಂದಿ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ.ನ.5 ರಂದು ಎಸ್‌ಡಿಸಿ ರುದ್ರಣ್ಣ ತಹಸೀಲ್ದಾರ್ ಚೇಂಬರ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ರುದ್ರಣ್ಣ ಪತ್ನಿ ಗಿರಿಜಾ ಜೊತೆಗೆ ಎಸ್‌ಡಿಸಿ ಸುರೇಖಾ ನೇರ್ಲಿ ಕೂಡ ದೂರು ನೀಡಲು ಹೋಗಿದ್ದರು. ಸತ್ತವನು ಸತ್ತಿದ್ದಾನೆ, ಮುಂದೇನು ಆಗಬೇಕು ಅದನ್ನು ಮಾಡುವಂತೆ ದೂರುದಾರರ ದಿಕ್ಕು ತಪ್ಪಿಸುವ ಕೆಲಸವಾಗಿದೆ. ಈ ಹಿಂದೆ ತಹಸೀಲ್ದಾರ್ ಕಚೇರಿಯ ಜವಾನ ಪ್ರದೀಪ ಆತ್ಮಹತ್ಯೆ ಹಿಂದೆಯೂ ಸುರೇಖಾ ಕೈವಾಡ ಇದೆ. ಈ ಪ್ರಕರಣವನ್ನು ತಹಸೀಲ್ದಾರ್ ಡ್ರೈವರ್ ಯಲ್ಲಪ್ಪ ಬಡಸದ, ಎಸ್‌ಪಿ ಶಿಂಧೆ ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿ ಈ ಪತ್ರದಲ್ಲಿ ಬರೆಯಲಾಗಿದೆ.ತಹಸೀಲ್ದಾರ್ ಬಸವರಾಜಗೆ ನಿರೀಕ್ಷಣಾ ಜಾಮೀನು ಸಿಕ್ಕಾಗ ಇದೇ ಎಸ್‌.ಪಿ.ಶಿಂಧೆ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದರು. ಅಲ್ಲದೇ, ಆಪಾದಿತರ ವಿರುದ್ಧ ಹೇಳಿಕೆ‌ ನೀಡದಂತೆ ಕಚೇರಿ ಸಿಬ್ಬಂದಿಗೆ‌ ಎಸ್‌.ಪಿ.ಶಿಂಧೆ ಸೂಚನೆ ನೀಡಿದ್ದಾರೆ. ಎಸ್‌.ಪಿ.ಶಿಂಧೆ ವಿರುದ್ಧ ಮಾತನಾಡುವ ಹಲವು ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಎಸ್‌ಡಿಸಿ ರುದ್ರಣ್ಣ ಆತ್ಮಹತ್ಯೆ ಬಳಿಕ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಪ್ರದೀಪ‌ ತೋರಗಲ್ಲ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಿದರೆ ‌ಈ ಕೇಸ್ ಸಲುವಾಗಿ ಹೊರಟಿದ್ದಾರೆ ಎಂಬುದು ತಿಳಿದಿದೆ.

ಸಿಬ್ಬಂದಿ ಬೆದರಿಸಿ, ತಲೆತುಂಬಿ ವಿಚಾರಣೆ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ತಕ್ಷಣವೇ ಈ ಪ್ರಕರಣ ಸಿಬಿಐಗೆ ವಹಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡುವಂತೆ ಪತ್ರ ಮುಖೇನ ಬೆಳಗಾವಿ ತಹಸೀಲ್ದಾರ್‌ ಕೆಲ ಸಿಬ್ಬಂದಿ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ