ಮಂಗಳೂರು : ಮೂಲ ಜಿಡಿಪಿ ಸೃಷ್ಟಿಸುವ ವೃತ್ತಿ ಇಂಜಿನಿಯರಿಂಗ್. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ಗಳು, ಕ್ವಾಂಟಮ್ ತಂತ್ರಜ್ಞಾನ ಹಾಗೂ ಗುರಿನಿರ್ದಿಷ್ಟ ಔಷಧ ವಿತರಣೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುವಂತೆ ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ ಅಧ್ಯಕ್ಷ ಹಾಗೂ ಇನ್-ಸ್ಪೇಸ್ ಮಂಡಳಿ ಸದಸ್ಯ ಜೆ.ಡಿ.ಪಾಟೀಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಭಾರತ-2047ರ (ವಿಕಸಿತ ಭಾರತ) ಕನಸನ್ನು ನನಸು ಮಾಡುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ. ವಿದೇಶಗಳ ನಿಯಂತ್ರಣದಲ್ಲಿರುವ ಡಿಜಿಟಲ್ ವ್ಯವಸ್ಥೆಗಳು ಯಾವಾಗ ಬೇಕಾದರೂ ಅಡಚಣೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ದೇಶೀಯ ಕಾರ್ಯತಂತ್ರದ ತಂತ್ರಜ್ಞಾನಗಳ ಅಭಿವೃದ್ಧಿ ಅತ್ಯಗತ್ಯ ಎಂದರು.
ಎನ್ಐಟಿಕೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ.ಮುರುಗಪ್ಪನ್ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿ, ಎಐ ಅಪಾಯವಲ್ಲ, ಬದಲಾಗಿ ಸಂಸ್ಥೆಗಳ ಸಾಮರ್ಥ್ಯ ನಿರ್ಮಾಣದ ಹಲವು ದಶಕಗಳ ಪಯಣವನ್ನು ವೇಗಗೊಳಿಸುವ ಅವಕಾಶವಾಗಿದೆ. ಎಐ ಬಳಸಲು ಅಥವಾ ಅದರೊಂದಿಗೆ ಕೆಲಸ ಮಾಡಲು ಅಸಮರ್ಥರಾಗಿರುವವರನ್ನು ಅದು ಬದಲಾಯಿಸಬಹುದು ಎಂದರು.ಪದವಿ ಪ್ರದಾನ:ಘಟಿಕೋತ್ಸವ ಎರಡು ಅಧಿವೇಶನಗಳಲ್ಲಿ ಆಯೋಜಿಸಲಾಗಿದ್ದು, ಪೂರ್ವಾಹ್ನ ಸ್ನಾತಕೋತ್ತರ (ಪಿಜಿ) ಹಾಗೂ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮತ್ತು ಅಪರಾಹ್ನದಲ್ಲಿ ಪದವಿ (ಯುಜಿ) ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.