ಜಿಲ್ಲಾದ್ಯಂತ ಎಲ್‌ಎಚ್‌ಬಿಎಸ್‌ ಯೋಜನೆ ಜಾರಿ

KannadaprabhaNewsNetwork |  
Published : May 12, 2026, 03:15 AM IST
ಪೊಲೀಸ್ ಇಲಾಖೆಯಿಂದ ಆಸರೆ ಕಾರ್ಯಕ್ರಮ ಹಾಗೂ ಜಿಲ್ಲಾದ್ಯಂತ ಎಲ್‌ಹೆಚ್‌ಬಿಎಸ್‌ ಯೋಜನೆ ಜಾರಿ: ಎಸ್‌ಪಿ ಲಕ್ಷ್ಮಣ ನಿಂಬರಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರೀಕರಿಗೆ ಮತ್ತು ಒಂಟಿ ಮಹಿಳೆಯರಿಗೆ ಸಹಾಯವಾಗಲಿರುವ ಆಸರೆ ಎಂಬ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯಿಂದ ಜಿಲ್ಲಾದ್ಯಂತ ಜಾರಿಗೆ ತರಲಾಗಿದ್ದು, ಈಗಾಗಲೇ 73 ವಿವಿಧ ಸ್ಥರಗಳಲ್ಲಿರುವ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರೀಕರಿಗೆ ಮತ್ತು ಒಂಟಿ ಮಹಿಳೆಯರಿಗೆ ಸಹಾಯವಾಗಲಿರುವ ಆಸರೆ ಎಂಬ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯಿಂದ ಜಿಲ್ಲಾದ್ಯಂತ ಜಾರಿಗೆ ತರಲಾಗಿದ್ದು, ಈಗಾಗಲೇ 73 ವಿವಿಧ ಸ್ಥರಗಳಲ್ಲಿರುವ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ 28 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿನ 329 ಬೀಟ್‌ಗಳಲ್ಲಿಯೂ ಆಸರೆ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಈಗಾಗಲೇ ಮನೆ-ಮನೆಗೆ ಪೊಲೀಸ್‌ ಎಂಬ ಕಾರ್ಯಕ್ರಮ ಜಾರಿಯಲ್ಲಿದ್ದು, ಅದರ ಒಂದು ಭಾಗವಾಗಿ ಆಸರೆ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಜಿಲ್ಲೆಯ 329 ಬೀಟ್‌ ಸಿಬ್ಬಂದಿ ತಮ್ಮ ತಮ್ಮ ಬೀಟ್‌ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರೀಕರ ಹಾಗೂ ಒಂಟಿ ಮಹಿಳೆಯರನ್ನು ಗುರುತಿಸಿ, ಖುದ್ದಾಗಿ ಭೇಟಿಯಾಗಿ ಅವರು ಎದುರಿಸುತ್ತಿರುವ ತೊಂದರೆ, ಸಮಸ್ಯೆಗಳ ಬಗ್ಗೆ ಆಲಿಸುತ್ತಾರೆ. ಪ್ರಸ್ತುತ ಸರ್ಕಾರದಿಂದ ಹಿರಿಯ ನಾಗರೀಕರು, ಒಂಟಿ ಮಹಿಳೆಯರಿಗೆ ಜಾರಿಗೊಳಿಸಲಾದ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರಿಗೆ ಯೋಜನೆಯ ಸದುಪಯೋಗವನ್ನು ತಲುಪಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಆಸರೆ ಕಾರ್ಯಕ್ರಮದಲ್ಲಿ 73 ಜನರಿಗೆ ವಿವಿಧ ಯೋಜನೆಗಳನ್ನು ತಲುಪಿಸಲಾಗಿದೆ. 14 ವೃದ್ಧರಿಗೆ ವೃದ್ದಾಪ್ಯ ವೇತನ, 16 ವಿಧವೆಯರಿಗೆ ವಿಧವಾ ವೇತನ ಯೋಜನೆ, 08 ವಿಕಲಚೇತನರಿಗೆ ವಿಕಲಚೇತನ ಪೋಷಣಾ ವೇತನ ಪಿಂಚಣಿ, 06 ಜನರಿಗೆ ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆ, 10 ಜನರಿಗೆ ಹಿರಿಯ ನಾಗರೀಕರಿಗೆ ಗುರುತಿನ ಚೀಟಿ, 06 ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ, 06 ಜನರಿಗೆ ಭಾಗ್ಯಜ್ಯೋತಿ ಯೋಜನೆ ಅಡಿ ವಿದ್ಯುತ್‌ ಸಂಪರ್ಕ, 03 ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, 04 ಜನರಿಗೆ ಬ್ಯಾಂಕ ಹಾಗೂ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಿಸಿದ್ದು, ಒಟ್ಟು 73 ಜನರಿಗೆ ಪೊಲೀಸ್ ಇಲಾಖೆ ಸಿಬ್ಬಂದಿ ಮೂಲಕ ವಿವಿಧ ಇಲಾಖೆಗಳಲ್ಲಿ ಅವರ ಕೆಲಸಗಳನ್ನು ಮಾಡಿಸಿಕೊಟ್ಟು ಆಸರೆ ಒದಗಿಸಲಾಗಿದೆ. ಶ್ರಮ ವಹಿಸಿ, ಯೋಜನೆಗಳನ್ನು ತಲುಪಿಸುವಲ್ಲಿ ಉತ್ತಮ ಕರ್ತವ್ಯ ತೋರಿ ಜಿಲ್ಲೆಯ ಎಲ್ಲ ಪೊಲೀಸ್‌ ಅಧಿಕಾರಿ ಹಾಗೂ ಬೀಟ್‌ ಸಿಬ್ಬಂದಿ ಕರ್ತವ್ಯವನ್ನು ಶ್ಲಾಘಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಜಾರಿಗೆ ಬಂತು ಲಾಕ್ಡ್ ಹೌಸ್ ಬೀಟ್ ಸಿಸ್ಟಮ್: ಇನ್ನು ಜಿಲ್ಲೆಯಲ್ಲಿ ಬೀಗ ಹಾಕಿದ ಮನೆಗಳ ಕಳ್ಳತನ ತಡೆಯಲು ಜಿಲ್ಲೆಯಲ್ಲಿ ಒಂದು ವಿನೂತನ ಪ್ರಯೋಗ ಮಾಡಲಾಗಿದ್ದು, ಮಹತ್ವದ ಕಾರ್ಯಕ್ರಮವಾದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (ಎಲ್‌ಎಚ್‌ಬಿಎಸ್‌) ಜಿಲ್ಲಾದ್ಯಂತ ಜಾರಿಗೆ ತರಲಾಗಿದೆ. ಇದು ಪೊಲೀಸ್‌ ಇಲಾಖೆಯು ಸ್ವತ್ತಿನ ಅಪರಾಧಗಳನ್ನು (ಕಳ್ಳತನ) ತಡೆಗಟ್ಟುವ ಕೆಲಸ ಮಾಡಲಿದೆ. ಸಾರ್ವಜನಿಕರು ವಿವಿಧ ಕಾರಣಗಳಿಗಾಗಿ ತಮ್ಮ ಮನೆಯನ್ನು ಕೀಲಿ (ಬೀಗ) ಹಾಕಿಕೊಂಡು ಹೋದಾಗ ಆರೋಪಿಗಳು ಕೀಲಿ ಹಾಕಿದ ಮನೆಗಳನ್ನು ಗುರುತಿಸಿ, ಕಳ್ಳತನ ಕೃತ್ಯಗಳನ್ನು ಎಸಗುತ್ತಿರುವುದನ್ನು ತಡೆಗಟ್ಟಲು ಸಹಾಯವಾಗಲಿದೆ ಎಂದರು.

ಈ ವಿನೂತನ ತಂತ್ರಜ್ಞಾನವನ್ನು ಜಿಲ್ಲೆಯಲ್ಲಿ ಇಂದಿನಿಂದಲೇ ಪ್ರಾರಂಭಿಸಿದ್ದು, ಜಿಲ್ಲೆಯ ಸಾರ್ವಜನಿಕರು ವಿವಿಧ ಕಾರಣಗಳಿಗಾಗಿ ತಮ್ಮ ಮನೆಯನ್ನು ಕೀಲಿ ಹಾಕಿಕೊಂಡು ಹೋಗುವ ಸಂದರ್ಭದಲ್ಲಿ ಜಿಲ್ಲಾ ನಿಸ್ತಂತು (ಕಂಟ್ರೋಲ್‌ ರೂಂ) ಕೋಣಿಯ ಮೊ.8277970747 ಗೆ ಮಾಹಿತಿ ಕೊಡಬೇಕು. ಮನೆಯವರ ಹೆಸರು, ಮನೆಯ ವಿಳಾಸ, ಮನೆಯ ಜಿಪಿಎಸ್‌ ವಿವರ, ಮನೆಯ ಪೋಟೋ, ಮನೆಯಿಂದ ಹೊರ ಹೋಗುವ ಒಟ್ಟು ಅವಧಿ ಹಂಚಿಕೊಳ್ಳಬೇಕು. ಸಾರ್ವಜನಿಕರು ಕಂಟ್ರೋಲ್‌ ರೂಂ ಸಂಖ್ಯೆ: 8277970747 ಮಾಹಿತಿ ಹಂಚಿಕೊಂಡ ತಕ್ಷಣ ಸಂಬಂಧಪಟ್ಟ ಠಾಣೆಗೆ ಮಾಹಿತಿ ರವಾನಿಸಿ, ಬೀಟ್‌ ಸಿಬ್ಬಂದಿ ಮೂಲಕ ಮಾಹಿತಿ ನೀಡಿದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಕೊಂಡು ವಿವರವನ್ನು ಜಿಲ್ಲಾ ಕಂಟ್ರೋಲ್‌ ರೂಂಗೆ ರವಾನಿಸುತ್ತಾರೆ. ಜೊತೆಗೆ ಸಾರ್ವಜನಿಕರು ಈ ರೀತಿ ಹಂಚಿಕೊಂಡ ಮಾಹಿತಿಯ ವಿವರ (ಡಾಟಾ) ವನ್ನು ಗೌಪ್ಯವಾಗಿಡಲಾಗುವುದು.

-ಲಕ್ಷ್ಮಣ ನಿಂಬರಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವಿಜಯಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳದಿಂಗಳಂತೆ ಬದುಕನ್ನು ಬೆಳಗಬಲ್ಲದು ಕನ್ನಡ ಸಾಹಿತ್ಯ
ಆತ್ಮ ವಿಶ್ವಾಸದಿಂದ ಜೀವನ ರೂಪಿಸಿಕೊಳ್ಳಿ