ಯಲ್ಲಾಪುರ: ಆಧುನಿಕತೆಯ ಸೌಲಭ್ಯದ ನಡುವೆ ಜನರ ಬದುಕು ನೆಮ್ಮದಿ ಹುಡುಕುತ್ತಿದೆ. ಮಾನಸಿಕವಾಗಿ ನೆಮ್ಮದಿಯಿಂದ ಇರಲು ಪುಸ್ತಕ ಓದುವ ಹವ್ಯಾಸ ನೆರವಾಗುವುದು. ಹೊಸ ವಿಷಯಗಳನ್ನು ನೀಡುವ ಗ್ರಂಥಾಲಯಗಳು ಜ್ಞಾನ ಪ್ರಸಾರದ ಕೇಂದ್ರಗಳಾಗಬೇಕು. ಇಂದು ಪುಸ್ತಕದ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪರಂಪರೆಯಿಂದ ಬಂದ ಓದುವ ಅಭಿರುಚಿ ಉಳಿಸಿಕೊಳ್ಳೋಣ ಎಂದು ತಾಲೂಕಿನ ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಹೇಳಿದರು.
ಮುಖ್ಯಅತಿಥಿಗಳಾಗಿ ಸಾಹಿತಿ ಗಣಪತಿ ಬಾಳೆಗದ್ದೆ ಮಾತನಾಡಿ, ಸೃಜನಶೀಲ ಅಭಿವ್ಯಕ್ತಿಗೆ ಮತ್ತು ಭಾಷೆಯ ಕಲಿಕೆಗೆ ಗ್ರಂಥಾಲಯಗಳು ಸಹಕಾರಿ. ಉತ್ತಮ ಗ್ರಂಥಪಾಲಕ ಇಡೀ ಸಮಾಜಕ್ಕೆ ಒಬ್ಬ ಮಾರ್ಗದರ್ಶಿ ಶಿಕ್ಷಕ ಇದ್ದ ಹಾಗೆ. ಮೌನದ ಓದಿನ ತಾಣವು ಬದುಕಿನ ಧ್ಯೇಯವನ್ನು ಕಲಿಸುವುದು. ಓದಿನ ಆಸಕ್ತಿ ಬೆಳೆಸುವ ಚಟುವಟಿಕೆಗಳು ನಿರಂತರವಾಗಿ ಅರಿವು ಕೇಂದ್ರದ ಮೂಲಕ ಜರುಗಬೇಕು. ಮಾನವ ಸಂಪನ್ಮೂಲ ಸೃಜಿಸುವ ಕೆಲಸ ಓದುವ ಹವ್ಯಾಸದಿಂದ ಆಗುತ್ತದೆ. ಸಾಹಿತ್ಯದ ಪ್ರೀತಿ ಜೀವನದ ಪ್ರೀತಿ ಆಗಲಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಕೈಥಾನ್ ಡಿಸೋಜ, ಸದಸ್ಯೆ ರೂಪಾ ಪೂಜಾರಿ, ತಾಲೂಕಿನ ಗ್ರಂಥಪಾಲಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಗ್ರಂಥಾಲಯ ಅನುಷ್ಠಾನಗಳ ಕುರಿತು ಶಿಕ್ಷಣ ಫೌಂಡೇಶನ್ ಸಂಸ್ಥೆಯ ಜಿಲ್ಲಾ ಸಂಯೋಜಕ ಈಶ್ವರ ಬರಿಗಲ್ ಮಾಹಿತಿ ನೀಡಿದರು. ಪಿಡಿಒ ನಸ್ರೀನಾ ಎಕ್ಕುಂಡಿ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ ಮಾಂಜ್ರೇಕರ ನಿರ್ವಹಿಸಿದರು. ಅರಿವು ಕೇಂದ್ರದ ಗ್ರಂಥಪಾಲಕಿ ಕವಿತಾ ಪೂಜಾರಿ ವಂದಿಸಿದರು.ಉಮ್ಮಚಗಿಯಲ್ಲಿ ಗ್ರಂಥಪಾಲಕರ ದಿನಾಚರಣೆ ಉದ್ಘಾಟನೆಗೊಂಡಿತು.