ರಾಣಿಬೆನ್ನೂರು: ಲೋಕಜ್ಞಾನ ಅರಿಯಲು ಗ್ರಂಥಾಲಯಗಳಲ್ಲಿನ ಪುಸ್ತಕಗಳು ಸಹಕಾರಿಯಾಗಿವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ತಾಲೂಕಿನ ಕುಸಗೂರ ಗ್ರಾಮದಲ್ಲಿ ಗ್ರಂಥಾಲಯ ಮತ್ತು ನವರಾತ್ರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪುಸ್ತಕಗಳನ್ನು ಅಧ್ಯಯನ ಮಾಡುವ ವ್ಯಕ್ತಿ ಯಶಸ್ಸು ಗಳಿಸುತ್ತಾನೆ. ಇಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರಿಯಾಗಿರಿಸಿಕೊಂಡು ಅಧ್ಯಯನ ಮಾಡುವುದು ಅವಶ್ಯಕವಾಗಿದೆ. ಒಬ್ಬ ಉತ್ತಮ ಓದುಗಾರ ಹಲವಾರು ಉದ್ಯೋಗಗಳನ್ನು ಪಡೆಯುವ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಕುಸಗೂರು ಗ್ರಾಮದ ಯುವಕ, ಯುವತಿಯರು ಹೆಚ್ಚಿನ ಪ್ರಮಾಣದಲ್ಲಿ ಐಎಎಸ್/ ಕೆಎಎಸ್‌ನಂತಹ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಲಿ ಎಂದರು. ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ನಮ್ಮ ಆಚರಣೆಗಳು ಸಂಸ್ಕಾರಯುತವಾಗಿರಬೇಕು. ಮತ್ತೊಬ್ಬರಿಗೆ ನೋವುಂಟು ಮಾಡುವ ಕೆಡಕು ಮಾಡುವ ದುರ್ಬುದ್ಧಿಗಳನ್ನು ಬಿಡಬೇಕು. ನಮ್ಮ ಜನಪದರು ಹಾಕಿಕೊಟ್ಟ ಸಂಸ್ಕಾರಗಳಲ್ಲಿ ನಾವು ಸಾಗಬೇಕು ಎಂದರು.ದೇವಿ ಮಹಾತ್ಮೆ ಕುರಿತು ಕಾಂತೇಶರೆಡ್ಡಿ ಗೋಡಿಹಾಳ ವಿಶೇಷ ಉಪನ್ಯಾಸ ನೀಡಿದರು. ಗ್ರಾಪಂ ಅಧ್ಯಕ್ಷ ರಮೇಶ ಹೊಂಬರಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯಗಳ ಮಹತ್ವ ಮತ್ತು ಅವುಗಳನ್ನು ಬಳಸುವ ವಿಧಾನ ಕುರಿತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವಾನಂದ ಎಚ್. ಉಪನ್ಯಾಸ ನೀಡಿದರು. ಆಂಜನೇಯ ಸೇವಾ ಸಮಿತಿ ಕಾರ್ಯದರ್ಶಿ ರಾಜಸಾಬ್ ದೊಡ್ಡಮನಿ, ತಿಮ್ಮರೆಡ್ಡಿ ಜಂಗರಡ್ಡೇರ, ಜ್ಯೋತಿ ಕನ್ನಪ್ಪಳವರ, ಮೇಲಗಿರಿಯಪ್ಪ ಮೇಲಗಿರಿ, ಬಸವರಡ್ಡಿ ಗೋಡಿಹಾಳ ಆಸ್ಮಾಬಾನು ದೊಡ್ಮನಿ, ಆರ್.ಎಸ್. ಮೇಲಗಿರಿ, ರೇಖಾ ಮೂಲಿಮನಿ, ಸತೀಶ ಕೇತಾಳೆ. ಆರ್.ಡಿ. ಹೊಂಬರಡಿ, ವೀರೇಶ ಜಂಬಿಗಿ, ಎಚ್.ಎಸ್. ಮುದಿಗೌಡರ, ನಿಂಗಪ್ಪ ಹದಡಿ, ಚೆನ್ನಪ್ಪ ಹಡಿಯಾಲ, ಬಸವರಾಜ ಬನ್ನಿಹಟ್ಟಿ, ಮಾಲತೇಶ ಸುಳ್ಳನ್ನವರ, ಯಲ್ಲರಡ್ಡಿ ತಿಮ್ಮಣ್ಣನವರ, ಚೌಡಪ್ಪ ಮಲ್ಲಾಡದ, ಶಿವಪುತ್ರಪ್ಪ ಮಲ್ಲಾಡದ, ಮಲ್ಲೇಶ ಬೆಣ್ಣೆಗೌಡ್ರ, ಹನುಮಂತಗೌಡ ಮೂಕನಗೌಡ್ರ ಉಪಸ್ಥಿತರಿದ್ದರು.