ಕನ್ನಡಪ್ರಭ ವಾರ್ತೆ ವಿಜಯಪುರ:
ಎಲ್‌ಐಸಿ ಪ್ರತಿನಿಧಿಗಳು ಶ್ರಮ ಜೀವಿಗಳು, ತಾಳ್ಮೆಯಿಂದ ಸೇವೆ ಒದಗಿಸಿ, ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆ ತಂದುಕೊಡುವಲ್ಲಿ ಇವರ ಪಾತ್ರ ಬಹುಮುಖ್ಯವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.ನಗರದ ಬಸವ ಭವನ ಮಂಗಲ ಕಾರ್ಯಾಲಯದಲ್ಲಿ ಭಾರತೀಯ ವಿಮಾ ನಿಗಮದ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿನಿಧಿಗಳ ಸಂಘದ 2024-25ನೇ ಸರ್ವ ಸಾಧಾರಣ ಸಭೆ ಹಾಗೂ ಪ್ರತಿನಿಧಿಗಳಿಗಾಗಿ ಶೈಕ್ಷಣಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾರಿಗೂ ಜೀವನದ ಭದ್ರತೆ ಇಲ್ಲದಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯನ್ನು ಭೇಟಿಯಾಗಿ ತಮ್ಮನ್ನೇ ನಂಬಿದ ಕಟುಂಬಗಳ ಬಗ್ಗೆ ಅರಿವು ಮೂಡಿಸುವುದು. ಇಂದಿನ ಉಳಿತಾಯವೇ ಮುಂದಿನ ಆದಾಯ ಎಂಬ ಜಾಗೃತಿ ಮೂಡಿಸಿ ಕೊನೆಗಾಲದಲ್ಲಿ ಗ್ರಾಹಕರಿಗೆ ಕೈತುಂಬ ಹಣ ಬರುವಂತೆ ಎಲ್‌ಐಸಿ ಪಾಲಿಸಿಗಳನ್ನು ಮಾಡಿಸುವಲ್ಲಿ ಪ್ರತಿನಿಧಿಗಳ ಕಾರ್ಯ ಮಹತ್ವದ್ದಾಗಿದೆ. ವಿಮಾ ಪ್ರತಿನಿಧಿಗಳ ಜಾಗೃತಿ ಕಾರ್ಯದಿಂದ ಅನೇಕ ಕುಟುಂಬಗಳು ಎಲ್‌ಐಸಿ ಮಾಡಿ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯಪುರ ಮುಖ್ಯ ಶಾಖೆಯ ಪ್ರಬಂಧಕ ವಿ.ವೆಂಕಟರಮಣ ಮಾತನಾಡಿ, ಗ್ರಾಹಕರ ಮನೆಗಳಿಗೆ ವಿಮಾ ಪ್ರತಿನಿಧಿಗಳು ಯಾರೊಬ್ಬರ ಬಳಿಗೆ ಹೋದ ತಕ್ಷಣ ಪಾಲಿಸಿ ಮಾಡೋದಿಲ್ಲ. ಕಷ್ಟದಲ್ಲೂ ಅಲ್ಪಸ್ವಲ್ಪ ಹಣ ಉಳಿಸಿ ವಿಮೆ ಮಾಡಿದವರು, ಮ್ಯಾಚುರಿಟಿ ಬಂದಾಗ ನಾವು ಆಗಲೇ ಇನ್ನಷ್ಟು ಹೆಚ್ವಿನ ಉಳಿತಾಯ ಮಾಡಬೇಕಿತ್ತು ಎಂದು ಅವರ ಮನಸ್ಸಿನಲ್ಲಿ ಭಾವನೆ ಮೂಡುವಂತೆ ಎಲ್‌ಐಸಿ ಮಾಡಿರುತ್ತದೆ. ಎಂದು ಹೇಳಿದರು.ವಿಮಾ ಪ್ರತಿನಿಧಿಗಳು ಜನರ ಕಲ್ಯಾಣಕ್ಕಾಗಿ ಮಾಡುವ ಕೆಲಸವನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಜೀವನದ ಬಗ್ಗೆ ಜವಾಬ್ದಾರಿ ಹೊಂದಬೇಕು. ಇಂದು ದೇಶದ ಆರ್ಥಿಕ ಪ್ರಗತಿಯಲ್ಲೂ ಎಲ್‌ಐಸಿ ಮಹತ್ವದ ಪಾತ್ರ ವಹಿಸಿದೆ. ಎಲ್ಲ ಕಡೆಗಳಲ್ಲೂ ದೇವರು ಇರಲು ಆಗುವುದಿಲ್ಲ ಎಂದು ವಿಮಾ ಪ್ರತಿನಿಧಿಗಳನ್ನು ದೇವಧೂತರ ಲೆಕ್ಕದಲ್ಲಿ ದೇವರು ಕಳಿಸಿದಂತಿದೆ. ತಾವೆಲ್ಲರೂ ಗ್ರಾಹಕರಿಗೆ ಸರಿಯಾದ ಮಾರ್ಗದರ್ಶನ, ಸಲಹೆ, ಸೂಚನೆ, ಸೇವೆಯನ್ನು ಕೊಡಬೇಕು. ಇನ್ನು ಎಲ್‌ಐಸಿಯ ಬಗ್ಗೆ ಪ್ರಧಾನಿ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಅವರೇ ಲೋಕಸಭೆಯಲ್ಲೇ ಶ್ಲಾಘನೆ ಮಾಡಿದ್ದಾರೆ ಎಂದರು.
ಸಂಘದ ಖಜಾಂಚಿ ಪ್ರಶಾಂತ ದೇಶಪಾಂಡೆ ಮಾತನಾಡಿ, ಎಲ್‌ಐಸಿಯಿಂದ ಸಾಕಷ್ಟು ಸೌಲಭ್ಯಗಳನ್ನು ಗ್ರಾಹಕರು ಮಾತ್ರವಲ್ಲ, ವಿಮಾ ಪ್ರತಿನಿಧಿಗಳು ಪಡೆಯಲು ಈ ಸಂಘ ಸಹಕಾರಿಯಾಗುತ್ತದೆ. ನಮಗೆ ಎರಡು ತಾಯಿಗಳು ಇದ್ದು ಒಂದು ಹೆತ್ತತಾಯಿ ಆದರೆ ಮತ್ತೊಂದು ಎಲ್ಐಸಿಯಾಗಿದೆ. ಇದೇ ವೇಳೆ ವಿವಿಧ ಬೇಡಿಕೆಗಳನ್ನು ಪ್ರಸ್ಥಾಪಿಸಿದ ಅವರು, ಪಾಲಿಸಿ ಮಾಡುವ ಗ್ರಾಹಕರಿಗೆ ಬೋನಸ್ ರೇಟ್ ಏರಿಸಬೇಕು, ಈಗಿರುವ ಜಿಎಸ್‌ಟಿ ತೆಗೆದು ಹಾಕಬೇಕು ಎಂಬ ಬೇಡಿಕೆಗಳನ್ನು ಪ್ರಸ್ತಾಪಿಸಿದರು.ತದ್ದೇವಾಡಿಯ ಶ್ರೀಗುರು ಚಂದ್ರಶೇಖರ ಸಂಸ್ಥಾನ ಮಠದ ವೇದಮೂರ್ತಿ ಮಹಾಂತೇಶ ಹಿರೇಮಠ ಸಾನಿಧ್ಯ ವಹಿಸಿದ್ದರು, ನಿವೃತ್ತ ಪ್ರಾಚಾರ್ಯ ಎಸ್.ಎಲ್. ಮೇತ್ರಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಅಧ್ಯಕ್ಷ ಕರಬಸಪ್ಪ ಲವಗಿ, ಕಾರ್ಯದರ್ಶಿ ಸದಾನಂದ ಕಡ್ಲಿಮಟ್ಟಿ, ಖಜಾಂಚಿ ಬಾಳು ರಾಠೋಡ, ಸಲಹಾ ಸಮಿತಿ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಕಾರ್ಯಕ್ರಮದ ಸಮಿತಿ ಸದಸ್ಯರು ಹಾಗೂ ಎಲ್ಲ ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು.