ಅರಸೀಕೆರೆ: ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸಿ ವಿಶ್ವಾಸ ನಿರ್ಮಿಸುವುದೇ ವಿಮಾ ಕ್ಷೇತ್ರದಲ್ಲಿ ಯಶಸ್ಸಿನ ಮೂಲವಾಗಿದ್ದು, ಪ್ರತಿನಿಧಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದಾಗ ಮಾತ್ರ ನಿರಂತರ ಸಾಧನೆ ಸಾಧ್ಯ ಎಂದು ಮೈಸೂರು ವಿಭಾಗಾಧಿಕಾರಿ ಶ್ರೀಮತಿ ಕೃಷ್ಣವೇಣಿ ಹೇಳಿದರು.ನಗರದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಕಚೇರಿಯಲ್ಲಿ ಆಯೋಜಿಸಿದ್ದ ಸಾಧಕರ ಸಭೆಯಲ್ಲಿ ಅವರು ಮಾತನಾಡಿ, ದೇಶದಲ್ಲಿ ಎಲ್‌ಐಸಿಗೆ ಸಮಾನವಾದ ಮತ್ತೊಂದು ವಿಮಾ ಸಂಸ್ಥೆ ಇಲ್ಲ. ಕಳೆದ ವರ್ಷ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಅರಸೀಕೆರೆ ಶಾಖೆ, ಈ ವರ್ಷವೂ ಉತ್ತಮ ಸೇವೆ ಹಾಗೂ ಪಾಲಿಸಿ ಮಾರಾಟದಲ್ಲಿ ಮುಂಚೂಣಿಯಲ್ಲಿ ಇರಬೇಕೆಂದು ಆಶಿಸಿದರು.ವಿಭಾಗೀಯ ಮಾರುಕಟ್ಟೆ ಅಧಿಕಾರಿ ಜೀವನ್ ಕುಮಾರ್, ಶಾಖಾ ವ್ಯವಸ್ಥಾಪಕ ರಿಷಿ ಚರಣ್ ಮಾತನಾಡಿ, ಅರಸೀಕೆರೆ ಶಾಖೆಯಲ್ಲಿ 380ಕ್ಕೂ ಹೆಚ್ಚು ಪ್ರತಿನಿಧಿಗಳಿದ್ದು, ಈ ವರ್ಷ ನಿಗದಿತ ಏಳು ಸಾಧನಾ ಗುರಿಗಳನ್ನು ತಲುಪಲು ಎಲ್ಲರೂ ಶ್ರಮಿಸಿದರೆ ಶಾಖೆ ಮತ್ತೆ ಪ್ರಥಮ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಲಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಹರಳಹಳ್ಳಿ ಬಸವರಾಜ್, ಎಂಡಿಆರ್‌ಟಿ ಪ್ರಶಸ್ತಿ ವಿಜೇತೆ ಹೇಮಲತಾ, ಶತಕ ಪಾಲಿಸಿ ಪೂರ್ಣಗೊಳಿಸಿದ ಕಮಲಮ್ಮ ಮಧು ಸೇರಿದಂತೆ ಗಣನೀಯ ಸಾಧನೆ ಮಾಡಿದ ಅಭಿವೃದ್ಧಿ ಅಧಿಕಾರಿಗಳು, ಸಿಎಲ್‌ಐ, ಐಎಲ್‌ಐ ಮತ್ತು ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.