ಅನಧಿಕೃತ ಗರ್ಭಪಾತ ನಡೆಸುವ ಆಸ್ಪತ್ರೆಯ ಪರವಾನಿಗೆ ರದ್ದು: ಡಾ. ಲಿಂಗರಾಜು

KannadaprabhaNewsNetwork |  
Published : Feb 14, 2025, 12:33 AM IST
12ಕೆಪಿಎಲ್24 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಮತ್ತು ಎಂ.ಟಿ.ಪಿ ಕಾಯ್ದೆಯ ಅಡಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ | Kannada Prabha

ಸಾರಾಂಶ

ಆಸ್ಪತ್ರೆಗಳಲ್ಲಿ ಅನಧಿಕೃತ ಗರ್ಭಪಾತ ನಡೆಸಿದರೆ ಪ್ರಕರಣ ದಾಖಲಿಸಿ, ಅಂತಹ ಆಸ್ಪತ್ರೆಯ ಪರವಾನಿಗೆ ರದ್ದುಪಡಿಸಲಾಗುವುದು.

ಪಿ.ಸಿ. ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಮತ್ತು ಎಂ.ಟಿ.ಪಿ ಕಾಯ್ದೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಕನ್ನಡಪ್ರಭ ವಾರ್ತೆ ಕೊಪ್ಪಳ

ಆಸ್ಪತ್ರೆಗಳಲ್ಲಿ ಅನಧಿಕೃತ ಗರ್ಭಪಾತ ನಡೆಸಿದರೆ ಪ್ರಕರಣ ದಾಖಲಿಸಿ, ಅಂತಹ ಆಸ್ಪತ್ರೆಯ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಟಿ.ಲಿಂಗರಾಜು ಕಟ್ಟುನಿಟ್ಟಿನ ಎಚ್ಚರಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಪಿ.ಸಿ. ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಮತ್ತು ಎಂ.ಟಿ.ಪಿ ಕಾಯ್ದೆಯ ಅಡಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಪಿಸಿ & ಪಿ.ಎನ್.ಡಿ.ಟಿ ಕಾಯ್ದೆ-1994ರಡಿಯಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಅವಕಾಶವಿಲ್ಲ. ಆದಾಗ್ಯೂ ಇಂತಹ ಕಾನೂನು ಬಾಹಿರ ಕ್ರಮಗಳಲ್ಲಿ ಭಾಗಿಯಾದಲ್ಲಿ ಅಂತವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕಾಯ್ದೆಯಡಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಇದಲ್ಲದೆ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತಂತೆ ಯಾವುದೇ ರೀತಿಯ ಜಾಹೀರಾತು ನೀಡುವಂತಿಲ್ಲ. ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರ ವಿರುದ್ಧ ಕಠಿಣ ಕ್ರಮಕ್ಕೂ ಅವಕಾಶವಿದ್ದು, ಇದರ ತಪಾಸಣಾ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ಕಾಯ್ದೆಯಡಿ ರಚಿಸಲಾಗಿದೆ. ತಪಾಸಣಾ ಸಮಿತಿಯು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಸಲಹಾ ಸಮಿತಿ ಸಭೆಯಲ್ಲಿ ವರದಿ ನೀಡುತ್ತದೆಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ್ ಎಂ.ಎಚ್. ಮಾತನಾಡಿ, ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳು ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಯಡಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಬೇಕು. ಸ್ಕ್ಯಾನಿಂಗ್ ಕುರಿತಾದ ಮಾರ್ಗಸೂಚಿಗಳನ್ನು ಪಾಲಿಸಿ ನಿಗದಿತ ನಮೂನೆ ನಿರ್ವಹಿಸಬೇಕು. ನೋಂದಣಿ, ಪರವಾನಗಿ ನವೀಕರಣವಿಲ್ಲದ ಆರೋಗ್ಯ ಸಂಸ್ಥೆಗಳ ಮೇಲೆ, ನಿಗದಿತ ನಿಯಮ ಪಾಲನೆ ಹಾಗೂ ದಾಖಲಾತಿಗಳನ್ನು ನಿರ್ವಹಿಸದ ಆರೋಗ್ಯ ಸಂಸ್ಥೆಗಳನ್ನು ಮುಚ್ಚಿಸಲು ಅಥವಾ ಸ್ಥಗಿತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಕಾಯ್ದೆಯಡಿ ಅವಕಾಶವಿದೆ. ಪಿಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧಿಸಲಾಗಿದ್ದು, ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆಯಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರಿಗೆ ಕಾರಾಗೃಹ ಶಿಕ್ಷೆ ಸಹಿತ ದಂಡವನ್ನು ವಿಧಿಸಲಾಗುವುದು. ಮೊದಲ ಅಪರಾಧಕ್ಕೆ 5 ವರ್ಷ ವೈದ್ಯಕೀಯ ಪರವಾನಿಗೆಯನ್ನು ರದ್ದುಪಡಿಸುವುದು. ನಂತರದ ಅಪರಾದಕ್ಕೆ ಸಂಬಂಧಿಸಿದ ವೈದ್ಯರ ವೈದ್ಯಕೀಯ ಪರವಾನಿಗೆಯನ್ನು ರಾಜ್ಯ ವೈದ್ಯಕೀಯ ಮಂಡಳಿಯಿಂದ ಶಾಶ್ವತವಾಗಿ ತೆಗೆದು ಹಾಕಿ, ವೈದ್ಯಕೀಯ ವೃತ್ತಿ ನಡೆಸಲು ಆಜೀವ ನಿಷೇಧ ಹೇರಲಾಗುವುದು. ಒಂದು ವೇಳೆ ಸ್ವತಃ ಮಹಿಳೆ, ಆಕೆಯ ಪತಿ ಅಥವಾ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಯತ್ನಿಸಿ, ವೈದ್ಯರಿಗೆ ಒತ್ತಡ ಹೇರಿದಲ್ಲಿ ಅವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರದಿಂದ 1 ಲಕ್ಷದವರೆಗೆ ದಂಡವನ್ನು ವಿಧಿಸಲು ಅವಕಾಶವಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಮುನಿರಾಬಾದ್ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞ ಹಾಗೂ ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿಗೆ ಅಧ್ಯಕ್ಷ ಡಾ ಕೆ.ಎಚ್. ತೊಗರಿ, ಸಮಿತಿ ಸದಸ್ಯರಾದ ಡಾ. ಗಿರೀಶ, ಡಾ. ದಯಾನಂದಸ್ವಾಮಿ, ಡಾ. ಈಶ್ವರ ಸವಡಿ, ಡಾ. ಸ್ಮಿತಾ ಜೆ. ಐಲಿ, ಆರ್‌.ಐ.ಎಂ. ಅಧ್ಯಕ್ಷ ಡಾ. ಶ್ರೀನಿವಾಸ್‌, ಗಂಗಾವತಿಯ ರಾಜಹಂಸ ಡಯಾಗೋಸ್ಟಿಕ್ ಸೆಂಟರ್‌ನ ಡಾ.ಮಲ್ಲನಗೌಡ ಪೊಲೀಸ್ ಪಾಟೀಲ್, ವಕೀಲರಾದ ಶಂಕರ ಬಿಸರಳ್ಳಿ, ಎನ್.ಜಿ.ಓ.ಗಳ ಪ್ರತಿನಿಧಿಗಳಾದ ಡಾ. ವಿಶ್ವನಾಥ ಬಸವರಾಜ ನಲ್ವಾಡ, ಶಂಕ್ರಪ್ಪ ಬಿ. ಸುರಳ್, ರೇಷ್ಮಾ ಮತ್ತು ಸಲೀಮಾ ಜಾನ್ ಸೇರಿದಂತೆ ಇತರ ಸದಸ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

PREV

Recommended Stories

ಉಪನಗರ ರೈಲು ಯೋಜನೆಗೆ ಗ್ರಹಣ - ಪ್ರಧಾನಿ ಗಡುವು ಇಂದು ಮುಕ್ತಾಯ
ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ