ಸ್ವಚ್ಛತೆ ಕಾಯ್ದುಕೊಳ್ಳದಿದ್ದರೆ ಪರವಾನಗಿ ರದ್ದು: ಎಸಿ

KannadaprabhaNewsNetwork |  
Published : Sep 03, 2026, 01:30 AM IST
ಪೋಟೋ: 02ಎಸ್‌ಎಂಜಿಕೆಪಿ05ಶಿವಮೊಗ್ಗ ನಗರದ ಸೀನಪ್ಪ ಶೆಟ್ಟಿ(ಗೋಪಿ) ವೃತ್ತದ ಬಳಿ ಇರುವ ಫುಡ್‌ ಕೋರ್ಟ್‌ಗೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿತು. | Kannada Prabha

ಸಾರಾಂಶ

ನಗರದ ಫುಡ್‌ಕೋರ್ಟ್‌ಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡದಿರುವ ವ್ಯಾಪಾರಿಗಳಿಗೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಬಿಸಿ ಮುಟ್ಟಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಫುಡ್‌ಕೋರ್ಟ್‌ಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡದಿರುವ ವ್ಯಾಪಾರಿಗಳಿಗೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಬಿಸಿ ಮುಟ್ಟಿಸಿದೆ.

ನಗರದ ಗೋಪಿ ವೃತ್ತದ ಮಲ್ಲಿಕಾರ್ಜುನ ಚಿತ್ರಮಂದಿರದ ಸಮೀಪವಿರುವ ಸಸ್ಯಾಹಾರಿ ಫುಡ್ ಕೋರ್ಟ್ ಹಾಗೂ ಸವಾರ್ ಲೈನ್ ರಸ್ತೆಯಲ್ಲಿರುವ ಮಾಂಸಾಹಾರಿ ಫುಡ್ ಕೋರ್ಟ್‌ಗಳಿಗೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು ಸಮಗ್ರ ತಪಾಸಣೆ ನಡೆಸಿದರು.

ನಿಯಮ ಉಲ್ಲಂಘಿಸಿದ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದೆ. ನಿಗದಿತ ಗಡುವಿನೊಳಗೆ ನಿಯಮ ಪಾಲಿಸದಿದ್ದರೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದರು. ತಪಾಸಣೆ ವೇಳೆ ಬಹುತೇಕ ಮಳಿಗೆಗಳಲ್ಲಿ ಆಹಾರ ಸುರಕ್ಷತಾ ಪರವಾನಗಿ ಪತ್ರ ಪ್ರದರ್ಶಿಸದಿರುವುದು ಕಂಡುಬಂದಿದೆ. ಸಿಬ್ಬಂದಿಗೆ ಕೈತೊಳೆಯಲು ಕನಿಷ್ಠ ಸೋಪು ಮತ್ತು ಹ್ಯಾಂಡ್‌ವಾಶ್ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಉಪವಿಭಾಗಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕುಡಿಯುವ ನೀರನ್ನು ಸ್ವಚ್ಛತೆಯಿಲ್ಲದ ಕೊಳಕು ಬಕೆಟ್‌ಗಳಲ್ಲಿ ಸಂಗ್ರಹಿಸಿರುವುದು ಹಾಗೂ ಜ್ಯೂಸ್ ತಯಾರಿಕೆಯಲ್ಲಿ ಶುದ್ಧ ನೀರಿನ ಬದಲಾಗಿ ಹೊರಗಡೆ ಎಲ್ಲೆಂದರಲ್ಲಿ ಬಳಸುವ ಐಸ್ ಗಡ್ಡೆಗಳನ್ನು ಬಳಸುತ್ತಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿ ಕಡ್ಡಾಯವಾಗಿ ಕೈಗವಸು ಮತ್ತು ಹೇರ್ ಕ್ಯಾಪ್ ಬಳಸದಿರುವ ಬಗ್ಗೆಯೂ ಎಚ್ಚರಿಕೆ ನೀಡಲಾಯಿತು.

ಆಹಾರ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡುತ್ತಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಚಿಕನ್ ಹಾಗೂ ಗೋಬಿ ತಯಾರಿಕೆಯಲ್ಲಿ ನಿಷೇಧಿತ ರಾಸಾಯನಿಕಗಳು ಹಾಗೂ ಆರೋಗ್ಯಕ್ಕೆ ಹಾನಿಕಾರಕ ಕೃತಕ ಬಣ್ಣಗಳನ್ನು ಬೆರೆಸುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದರು. ಗುಣಮಟ್ಟವಿಲ್ಲದ ಅಡುಗೆ ಎಣ್ಣೆ ಹಾಗೂ ಪಾಮ್ ಆಯಿಲ್ ಬಳಸುತ್ತಿರುವ ಬಗ್ಗೆ ವ್ಯಾಪಾರಿಗಳನ್ನು ಪ್ರಶ್ನಿಸಿದರು. ಇದೇ ವೇಳೆ ಕೆಲವು ವ್ಯಾಪಾರಿಗಳು ತಯಾರಿಸಿದ್ದ ಮಾಂಸಾಹಾರಿ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸಂಗ್ರಹಿಸಿದ ತಂಡವು, ಅವುಗಳನ್ನು ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದೆ.

ಆಹಾರ ಸುರಕ್ಷತಾ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ತಪಾಸಣೆ ವೇಳೆ ಕಂಡುಬಂದಿರುವ ಲೋಪದೋಷಗಳ ಕುರಿತ ಸಮಗ್ರ ವರದಿ ಸಿದ್ಧಪಡಿಸಿ ಮುಂದಿನ ಕಠಿಣ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದುರೆ ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ಹೇಳಿದರು.

ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ವಿ.ಎಸ್. ರಾಜೀವ್, ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಹೆಲ್ತ್ ಇನ್ಸ್‌ಪೆಕ್ಟರ್ ಬಸವರಾಜ್, ತಹಸೀಲ್ದಾರ್ ಕಚೇರಿಯ ಆರ್‌ಐ ಸತೀಶ್, ಗ್ರಾಮ ಆಡಳಿತಾಧಿಕಾರಿಗಳಾದ ದೊಡ್ಡ ಬಸಪ್ಪ ರೆಡ್ಡಿ, ದೀಪಕ್ ಹಾಗೂ ಸಿಬ್ಬಂದಿ ಚೇತನ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿ.ಎ. ಸೈಟ್‌ ಶುಲ್ಕ ನಿಯಮ ಸರಳಗೊಳಿಸಿ: ಶಾಸಕರಾದ ಅರುಣ್‌, ಚನ್ನಬಸಪ್ಪ ಆಗ್ರಹ
ಕಸ್ತೂರಿ ರಂಗನ್‌ ವರದಿ ಗಂಭೀರತೆ ಅರಿಯದ ರಾಜಕಾರಣಿಗಳು: ಆರ್‌ಕೆ ಸಿದ್ದರಾಮಣ್ಣ