ಹುಬ್ಬಳ್ಳಿ: ದೇವರ ಬಗ್ಗೆ ತಪ್ಪು ಕಲ್ಪನೆ ನೀಡಿ ಜನರಲ್ಲಿ ಅತಿಯಾದ ಭಯ ಹುಟ್ಟಿಸಲಾಗಿದೆ. ಈ ಭಯ ಅಳಿದರೆ ಜನರ ಬದುಕು ಸುಖಮಯ, ಸುಂದರವಾಗುತ್ತದೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಈ ದೇಶದಲ್ಲಿ ದೇವರು, ಧರ್ಮದ ಹೆಸರಿನಲ್ಲೇ ಹೆಚ್ಚು ಅನಾಚಾರ ನಡೆದಿದೆ ಎಂದು ವಿಷಾಧಿಸಿದ ಶ್ರೀಗಳು, ದೇವರ ಹೆಸರಿನಲ್ಲಿ ಮಹಿಳೆಯನ್ನು ದೇವದಾಸಿ ಮಾಡಿದರಲ್ಲ, ಇದಕ್ಕಿಂತ ನೀಚ ಕೆಲಸ ಇನ್ನೇನಿದೆ? ದೇವರು ಕಾಡುತ್ತದೆ, ನೋಡುತ್ತದೆ ಎನ್ನುವ ಸುಳ್ಳುಗಳನ್ನು ಸೃಷ್ಟಿಸಿ ಜನರ ಮನಸಿನಲ್ಲಿ ಆತಂಕ, ಭಯಗಳನ್ನು ಸೃಷ್ಟಿಸಿ ಅವರು ಪ್ರಾಮಾಣಿಕವಾಗಿ ದುಡಿದು ಸಂಪಾದಿಸಿದ ಹಣ, ಹೈನು, ಆಸ್ತಿಗಳನ್ನು ದೋಚುತ್ತ ಬಂದಿದ್ದಾರೆ. ಈ ಶೋಷಣೆ ತಪ್ಪಬೇಕು ಎಂದರೆ ಮೊದಲು ಜನತೆ ಜಾಗೃತರಾಗಬೇಕು. ಯಾವುದೇ ದೇವರು ಕಾಡುವುದೂ ಇಲ್ಲ, ಬೇಡುವುದೂ ಇಲ್ಲ. ಅಂಥವುಗಳು ದೇವರೇ ಅಲ್ಲ. ತಮ್ಮನ್ನು ತಾವು ಅರಿಯುವ ಮೂಲಕ ಪಟ್ಟಭದ್ರರ ಈ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದು ಮಹಾಸ್ವಾಮಿಗಳು ನೆರೆದಿದ್ದ ಅಪಾರ ಜನಸ್ತೋಮಕ್ಕೆ ಕರೆನೀಡಿದರು.
ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧನ ಮಾತನ್ನು ಮರೆತಿರುವ ಸಮಾಜದಲ್ಲಿ ಅತಿಯಾಸೆ ಹೆಚ್ಚುತ್ತಿದೆ. ಆಸ್ತಿ-ಪಾಸ್ತಿ ಎಷ್ಟಿದ್ದರೂ ತೃಪ್ತಿಯಿಲ್ಲ. ಇನ್ನಷ್ಟು-ಮತ್ತಷ್ಟು ಬೇಕೆನ್ನುವ ಹಪಾಹಪಿ ಅತಿಯಾಗಿದೆ. ದೊಡ್ಡ ಮನೆ ಕಟ್ಟಿಸಿ ವಿಶಾಲವಾದ ಹಾಲ್, ಮಾಸ್ಟರ್ ಬೆಡ್ ಇತ್ಯಾದಿ ಸಕಲ ಸೌಲಭ್ಯ ಅಳವಡಿಸಿರುತ್ತಾರೆ. ಆದರೆ, ಇಂಥ ವೈಭೋಗದ ಮನೆಯಲ್ಲಿ ಧ್ಯಾನಕ್ಕೊಂದು ಕೋಣೆ, ಅಧ್ಯಯನಕ್ಕೊಂದು ಗ್ರಂಥಾಲಯ ಇರುವುದಿಲ್ಲ. ಹೀಗಿರುವಾಗ ನೆಮ್ಮದಿ ಸಿಗಲು, ತಮ್ಮನ್ನು ತಾವು ಅರಿಯಲು ಜಾಗವೆಲ್ಲಿದೆ ಆ ಮನೆಯಲ್ಲಿ? ಎಂದು ಪ್ರಶ್ನಿಸಿದ ಅವರು, ಆಸೆ ಇರಬೇಕು. ಬದುಕು ಆಸೆಯ ಮೇಲೆ ನಿಂತಿದೆ. ಆದರೆ, ದುರಾಸೆ ಅತೃಪ್ತಿ, ಅಸಮಾಧಾನ, ಆತಂಕಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.ಉತ್ತಮ ಗುರುಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿನ ವೈಫಲ್ಯವೇ ಸಮಾಜದಲ್ಲಿ ಮೂಢನಂಬಿಕೆಗಳು, ಕಂದಾಚಾರ, ಶೋಷಣೆಗಳು, ದುರಾಚಾರಗಳು ಹೆಚ್ಚಲು ಕಾರಣವಾಗಿದೆ. ಅವಧೂತರಾಗಿ ಬಾಳಿಹೋದ ಸಿದ್ಧಾರೂಢರು, ಸಿದ್ದಪ್ಪಜ್ಜ ಅವರ ಸುಕ್ಷೇತ್ರಗಳಲ್ಲಿ ಬಡವ-ಶ್ರೀಮಂತ, ಶ್ರೇಷ್ಠ-ಕನಿಷ್ಠ ತಾರತಮ್ಯಗಳಿಗೆ ಅವಕಾಶವಿಲ್ಲ. ಇಂಥ ಅವಧೂತರನ್ನು ಗುರುವೆಂದು ಒಪ್ಪಿಕೊಳ್ಳುವ ಮೂಲಕ ಮತ್ತು ಅವರು ತೋರಿದ ಮಾರ್ಗದಲ್ಲಿ ನಡೆಯುತ್ತ ದೇವರ ಹೆಸರಿನಲ್ಲಿ ನಡೆಯುವ ಅನಾಚಾರಗಳಿಗೆ ಕಡಿವಾಣ ಹಾಕಬೇಕು ಎಂದು ಜನತೆಯಲ್ಲಿ ಶ್ರೀಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಡಾ.ವಿಎಸ್‌ವಿ ಪ್ರಸಾದ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಇದ್ದರು.