- ಗುಡ್ಡೇಹಳ್ಳ ಶಾಲಾ ಆವರಣದಲ್ಲಿ ಧ.ಗ್ರಾ.ಯೋಜನೆಯಿಂದ ಸಾಮೂಹಿಕ ಸತ್ಯನಾರಯಣ ಪೂಜೆ ಹಾಗೂ ಧಾರ್ಮಿಕ ಸಭೆ
ಪ್ರತಿಯೊಬ್ಬರೂ ಶ್ರದ್ಧೆಯಿಂದ ದೇವರ ಸ್ಮರಣೆ ಮಾಡುತ್ತಾ ಬಂದರೆ ಜೀವನ ಸುಖಕರವಾಗಲಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರವಿಂದ ಸೋಮಯಾಜಿ ತಿಳಿಸಿದರು.
ಗುರುವಾರ ಗುಡ್ಡೇಹಳ್ಳ ಶಾಲಾ ಆವರಣದ ರಂಗಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಎಚ್.ಕೈಮರ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. 84 ಲಕ್ಷ ಜೀವಿಗಳನ್ನು ದಾಟಿ ಮಾನವ ಜೀವಕ್ಕೆ ಬಂದಿದ್ದೇವೆ. ಆದ್ದರಿಂದ ಮನುಷ್ಯರು ಸತ್ಸಂಗ ಮಾಡಬೇಕು. ತಂದೆ, ತಾಯಿಯರನ್ನು ಚೆನ್ನಾಗಿ ನೋಡಕೊಳ್ಳಬೇಕು. ಕೇವಲ ಕಷ್ಟ ಬಂದಾಗ ಮಾತ್ರ ದೇವರನ್ನು ನೆನೆಯದೆ ಸುಖ ಬಂದಾಗಲೂ ದೇವರ ಸ್ಮರಣೆ ಮಾಡಬೇಕು ಎಂದು ಸಲಹೆ ನೀಡಿದರು.ಅತಿಥಿಯಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ ಹಾಗೂ ಎನ್.ಆರ್ ಪುರ ತಾಲೂಕು ಯೋಜನಾಧಿಕಾರಿ ರಾಜೇಶ್ ಮಾತನಾಡಿ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ 2240 ಸ್ವಸಹಾಯ ಸಂಘಗಳಿವೆ. 15,900 ಸದಸ್ಯರಿದ್ದಾರೆ.ಈ ಹಿಂದೆ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ,ಬಾಳೆಹೊನ್ನೂರು ಸೇರಿತ್ತು.ನಿರ್ವಹಣೆ ಮಾಡುವುದು ಕಷ್ಟವಾಗಿದ್ದರಿಂದ ಈಗ ಶೃಂಗೇರಿ ,ಬಾಳೆಹೊನ್ನೂರು ಪ್ರತ್ಯೇಕವಾಗಿದೆ. 7 ವಲಯಗಳು ಕಾರ್ಯ ನಿರ್ವಹಿಸುತ್ತಿದೆ. ಶೇಖಡ 100 ರಷ್ಟು ಆರ್ಥಿಕ ಪ್ರಗತಿ ಸಾಧಿಸಿದ್ದೇವೆ.ಕೇವಲ ಸಾಲ ಮಾತ್ರ ನೀಡುತ್ತಿಲ್ಲ. ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದೇವೆ .ಮನೆಯಲ್ಲಿ ಧಾರ್ಮಿಕ ಕಾರ್ಯ ಮಾಡುವುದರ ಜೊತೆಗೆ ಸಾಮೂಹಿಕವಾಗಿಯೂ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದೇವೆ.ಈಗಾಗಲೇ 2 ವಲಯಗಳಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮುಕ್ತಾಯವಾಗಿದೆ.ಸಂಘದ ಸದಸ್ಯರಿಗೆ ಸುಲಭದಲ್ಲಿ ಸಾಲ ನೀಡುವ ವ್ಯವಸ್ಥೆ ಇದೆ.ಸದಸ್ಯರು ಪಡೆದ ಸಾಲವನ್ನು ಆದಾಯ ಬರುವುದಕ್ಕೆ ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ಮಾತನಾಡಿ, ನಮ್ಮ ಮನಸ್ಸಿನ ಒಳಗೆ ಇರುವ ಕೊಳಕನ್ನು ಮೊದಲು ತೆಗೆಯಬೇಕು.ಸ್ಥಾರ್ಥ ಬಿಡಬೇಕು. ಪ್ರತಿಯೊಬ್ಬರಲ್ಲೂ ದೇವರಿದ್ದಾನೆ.ಅದನ್ನು ಗುರುತಿಸಿ ಸಮಾಜದ ಯಾರಿಗೂ ತೊಂದರೆ ನೀಡದೆ ಬದುಕಬೇಕು ಎಂದರು. ಗುಡ್ಡೇಹಳ್ಳ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಆರ್. ನಾಗರಾಜ್, ಮಾವಿನ ಮನೆ ತಿಮ್ಮಣ್ಣ ಮಾತನಾಡಿದರು.
ಸುನೀಲ್ ಸ್ವಾಗತಿಸಿದರು. ತೀರ್ಥೇಶ್ ಕಾರ್ಯಕ್ರಮ ನಿರೂಪಿಸಿದರು.