ಅಜೀಜಅಹ್ಮದ ಬಳಗಾನೂರ
ರೈತರು ಬಿತ್ತನೆ ಬೀಜ, ಗೊಬ್ಬರ ಹಾಕುವ ವೇಳೆ ಇನ್ನಿಲ್ಲದ ತೊಂದರೆ ಅನುಭವಿಸುತ್ತಾರೆ. ಇಂತಹ ರೈತರಿಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ತಾಲೂಕಿನ ಕುರಡಿಕೇರಿ ಶಾಲೆಯ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ರೈತಸ್ನೇಹಿ ಬಿತ್ತನೆ ಬೀಜ, ಗೊಬ್ಬರ ಹಾಕುವ ಸಾಧನ ಕಂಡುಹಿಡಿದಿದ್ದಾರೆ. ಈಗಾಗಲೇ ಈ ಸಾಧನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿದೆ.
ಕುರಡಿಕೇರಿ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಅಜಯ ಉಣಕಲ್ಲ ಹಾಗೂ ಅಕ್ಷಯ ಬೇಪೂರಿ ವಿಜ್ಞಾನ ಶಿಕ್ಷಕಿ ರಾಜಶ್ರೀ ಬೀಡಿ ಮಾರ್ಗದರ್ಶನದಲ್ಲಿ ಈ ಸಾಧನ ಕಂಡುಹಿಡಿದ್ದಾರೆ.ರೈತರು ತಾವು ಬೆಳೆದ ಬೆಳೆಗಳಿಗೆ ಗೊಬ್ಬರ ಹಾಕುವಾಗ, ಬಾಗಿ ಬೀಜ ಬಿತ್ತನೆ ಮಾಡುವ ಸಂದರ್ಭದಲ್ಲಿ ಸೊಂಟನೋವು, ಮಂಡಿನೋವು, ರಾತ್ರಿಯ ವೇಳೆಯಲ್ಲಿ ಕಾರ್ಯನಿರ್ವಹಿಸಬೇಕಾದ ಸಂದರ್ಭದಲ್ಲಿ ಕ್ರಿಮಿ, ಕೀಟಗಳು ಕಚ್ಚುವಿಕೆ ಸೇರಿದಂತೆ ಇನ್ನಿತರೆ ಸಮಸ್ಯೆ ಅನುಭವಿಸುತ್ತಾರೆ. ಇದಕ್ಕೆ ಮುಕ್ತಿ ದೊರೆಯಬೇಕು ಎಂಬ ಉದ್ದೇಶದಿಂದ ಈ ಇಬ್ಬರು ವಿದ್ಯಾರ್ಥಿಗಳು " ಸ್ಮಾರ್ಟ್ ಫರ್ಟಿಲೈಸರ್ ಆ್ಯಂಡ್ ಸೀಡ್ ಸ್ಪ್ರೈಡಿಂಗ್ ಮಶಿನ್ " (Smart Fertilizer and Seed Spreading Machine) ಎಂಬ ರೈತಸ್ನೇಹಿ ಬೀಜ, ಗೊಬ್ಬರ ಹಾಕುವ ಸಾಧನ ಕಂಡುಹಿಡಿದ್ದಾರೆ.
ಈ ಸಾಧನವನ್ನು ಕೇವಲ ₹300-500 ಬಳಸಿ ನಿರ್ಮಿಸಲಾಗಿದೆ. ಇದರಲ್ಲಿ ಪಿವಿಸಿ ಪೈಪ್, ಕೊಡೆ(ಛತ್ರಿ), ಚಿಕ್ಕದಾದ ಸೋಲಾರ್ ಪ್ಯಾನಲ್, ಬೀಜ-ಗೊಬ್ಬರ ಸಂಗ್ರಹಿಸಲು ಡಬ್ಬಿ ಹಾಗೂ ಎಲ್‌ಇಡಿ ಲೈಟ್ ಅಳವಡಿಸಲಾಗಿದೆ. ರೈತರು ಹಗಲು ಹೊಲದಲ್ಲಿ ಕೆಲಸ ಮಾಡುವಾಗ ಬಿಸಿಲಿನಿಂದ ರಕ್ಷಣೆ ಪಡೆಯಲು ಛತ್ರಿ ಬಳಸಬಹುದು. ಇದಕ್ಕೆ ಸೋಲಾರ್ ಅಳವಡಿಸಿದ್ದು ರಾತ್ರಿ ಎಲ್‌ಇಡಿ ಲೈಟ್ ಬಳಸಿಕೊಂಡು ಕೃಷಿ ಚಟುವಟಿಕೆ ನಿರ್ವಹಿಸಲು ಸಹಕಾರಿಯಾಗಿದೆ. ಇದನ್ನು ಒಬ್ಬರೇ ನಿರ್ವಹಿಸಬಹುದಾಗಿದೆ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗಿ
ರಾಜಶ್ರೀ ಬೀಡಿ, ಕುರಡಿಕೇರಿಯ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ