ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಹಿರಿಯರ ಕವಿಗೋಷ್ಠಿಯನ್ನು ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಮೊಬೈಲ್, ಇಂಟರ್ನೆಟ್, ಫೇಸ್ಬುಕ್ ಇವುಗಳ ಕಲ್ಪನೆಯೇ ಇಲ್ಲದ ದಿನಗಳಲ್ಲಿ ಕುಟುಂಬದ ಸದಸ್ಯರೊಡನೆ ಬೆರೆತು ಯಾವುದೇ ಅಡೆತಡೆಗಳಿಲ್ಲದೆ ನಮ್ಮ ಹಿರಿಯರು ತಮ್ಮ ಅನುಭವವನ್ನು ತಿಳಿಸುತ್ತಿದ್ದರು. ಆದರೆ ಅಂತಹ ಪರಿಸ್ಥಿತಿಗಳಿಗೆ ತದ್ವಿರುದ್ಧವಾಗಿರುವ ಪರಿಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ ಎಂದರು. ನಂತರ ತಾವೇ ರಚಿಸಿದ ಚಪ್ಪಲಿಗಳು ನಾವು ಎಂಬ ಕವನವನ್ನು ವಾಚಿಸಿದರು.
ಜಿಲ್ಲೆಯ ಹಿರಿಯ ಹದಿನಾರು ಕವಿಗಳು ತಮ್ಮ ಕವನ ವಾಚನ ಮಾಡಿದರು. ಪ್ರತಿಯೊಂದು ಕವಿತೆಯೂ ತಮ್ಮ ಜೀವನದುದ್ದಕ್ಕೂ ತಾವು ಕಲಿತ ಅನುಭವಗಳನ್ನು ಧಾರೆ ಎರೆಯುವಂತಿತ್ತು. ತಮ್ಮ ಇಳಿ ವಯಸಿನಲ್ಲಿಯೂ ಕವನವಾಚಸಿದ ಕವಿಗಳು ಜೀವನೋತ್ಸಾಹ ತುಂಬಿದ ಕವನಗಳನ್ನು ವಾಚಿಸುವ ಮೂಲಕ ಕಾರ್ಯಕ್ರಮಕ್ಕೆ ಉತ್ಸಾಹ ತುಂಬಿದರು.ಗೌರವ ನೀಡಿದೆ:
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯುವ ಸಾಹಿತಿ, ಕವಿ ಕೃಪಾ ದೇವರಾಜ್ ಮಾತನಾಡುತ್ತಾ ಹಿರಿಯರ ಅನುಭವದ ಕವನಗಳು ಯುವ ಪೀಳಿಗೆಗೆ ಮಾರ್ಗದರ್ಶಕ ವಾಗಬೇಕು. ವಯಸ್ಸು ಕೇವಲ ಎಣಿಕೆಯ ಸಂಖ್ಯೆ ದೇಹಕ್ಕೆ ವಯಸ್ಸಾಗಬಹುದು. ಮನಸ್ಸಿಗೆ ಅಲ್ಲ ನಮ್ಮ ಮನಸ್ಸಿನಲ್ಲಿರುವ ಮುಗ್ಧತೆಯನ್ನು ಸದಾ ಲವಲವಿಕೆಯಿಂದ ಇಟ್ಟುಕೊಳ್ಳುವವರೇ ನಿಜವಾದ ಸಾಹಿತಿಗಳು ಎಂದರು. ಹಿರಿತನ ಎಂಬುದು ಅರಳು ಮರಳಲ್ಲ ಮರಳಿ ಅರಳುವ ಕಾಲ ಎಂದರು.
ಸಂತಸ ತಂದಿದೆ:
ಹಿರಿಯರ ಕವಿಗೋಷ್ಠಿಯಲ್ಲಿ ಕಿಗ್ಗಾಲು ಎಸ್ ಗಿರೀಶ್, ಮೂಟೆರ ಕೆ ಗೋಪಾಲಕೃಷ್ಣ, ಕೆ ಶೋಭಾ ರಕ್ಷಿತ್, ಕಟ್ರತನ ಲಲಿತಾ ಅಯ್ಯಣ್ಣ, ಅಂಬೆಕಲ್ಲು ಸುಶೀಲ ಕುಶಾಲಪ್ಪ , ಬಿ.ಜಿ ಅನಂತಶಯನ, ವಿದ್ವಾನ್ ಶಂಕರಯ್ಯ ಮಾಸ್ಟರ್, ಭಾಗೀರಥಿ ಹುಲಿತಾಳ, ರೇವತಿ ರಮೇಶ್ ಮಡಿಕೇರಿ, ಬಿ.ಬಿ.ನಾಗರಾಜ ಆಚಾರ್ ಶನಿವಾರಸಂತೆ, ಕೆ ಎಸ್ ನಳಿನಿ ಸತ್ಯನಾರಾಯಣ ಕುಶಾಲನಗರ, ಶಿವದೇವಿ ಅವನೀಶ್ಚಂದ್ರ, ಹರೀಶ್ ಸರಳಾಯ ಮಡಿಕೇರಿ, ಹಾ.ತಿ.ಜಯಪ್ರಕಾಶ್, ಪಿ.ಎಸ್ ವೈಲೇಶ್, ಪಿ.ಎ.ಸುಶೀಲ ಕವನ ವಾಚಿಸಿದರು.
ಕವಿ ಅನಂತಶಯನ ಕವನ ವಾಚನ ಮಾಡುತ್ತಾ ಕುಡಿದಿರುವೆ ನಾನು ಕಂಠಪೂರ್ತಿ ಕುಡಿದಿರುವೆ, ಜಗವ ಮರೆಯಲು ಕುಡಿದಿರುವೆ, ನನ್ನ ನಾ ಮರೆಯಲು ಕುಡಿದಿರುವೆ, ಎಲ್ಲರನ್ನೂ ಎಲ್ಲವನ್ನೂ ಮರೆಯಲು ಕುಡಿದಿರುವೆ, ಕುಡಿದಿರುವೆ ಗುರುವಿನ ಬೊಗಸೆಯಿಂದ ತೀರ್ಥ ಕುಡಿದಿರುವೆ, ದೈವೀಸ್ಪರ್ಶಿತ ಅಮೃತ ಬಿಂದುವನ್ನು ಕುಡಿದಿರುವೆ. ನಾನು ಲೋಕದ ನೋಟಕ್ಕೆ ಕುಡುಕನಾಗಿ ಕಾಣುವೆ ಹೌದು ನಾನು ಕುಡಿದಿರುವೆ ತಾತ್ಕಾಲಿಕ ಇರುವಿಕೆಯನ್ನು ಕಳಚಲು ಕುಡಿದಿರುವೆ, ನಿಶೆ ಏರಿ ಅಹಂ ಜಾರಿ ಮಹಾಪ್ರಜ್ಞೆಯೊಂದಿಗೆ ಒಂದಾಗಿ ಮರೆಯಾಗಲು ಅಮೃತ ಪಾನವ ಮಾಡಿರುವೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಪ್ರತಿಮಾ ರೈ ನಿರೂಪಿಸಿದರು. ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಎಸ್.ಎಸ್ ಸಂಪತ್ ಕುಮಾರ್ ವಂದಿಸಿದರು.