ಬಡವರ ಬಾಳಿಗೆ ಬೆಳಕಾದ ಗ್ಯಾರಂಟಿ ಯೋಜನೆಗಳು

KannadaprabhaNewsNetwork | Published : Sep 11, 2024 1:05 AM

ಸಾರಾಂಶ

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿಗಳು ಬಡ ಜನರ ಬಾಳಿಗೆ ಬೆಳಕಾಗಿವೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿಗಳು ಬಡ ಜನರ ಬಾಳಿಗೆ ಬೆಳಕಾಗಿವೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

ತಾಪಂನ ಆವರಣದಲ್ಲಿ ಮಂಗಳವಾರ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಾಕಿ ಉಳಿದಿರುವ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ತಾಲೂಕು ಯೋಜನಾ ಅನುಷ್ಠಾನ ಪ್ರಾಧಿಕಾರದ ನೂತನ ಅಧ್ಯಕ್ಷರು ಮತ್ತು ಸದಸ್ಯರು ಮಾಡಬೇಕು ಸಲಹೆ ನೀಡಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಶೇ.96 ರಷ್ಟು ಫಲಾನುಭವಿಗಳಿಗೆ ತಲುಪುತ್ತಿವೆ. ಇನ್ನು ಬಾಕಿ ಉಳಿದಿರುವ ಶೇ.4 ರಷ್ಟು ಜನರಿಗೂ ತಲುಪಲಿ ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ನೂತನ ಪ್ರಾಧಿಕಾರ ಮತ್ತು ಅದಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಪರಿಣಾಮ ಕಾರಿಯಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ನಿನ್ನೆಯಷ್ಟೇ ಯೋಜನಾ ಪ್ರಾಧಿಕಾರದ ಕಚೇರಿ ಉದ್ಘಾಟನೆಯಾಗಿದ್ದು, ನಂತರ ತಾಲೂಕು ಮಟ್ಟದಲ್ಲಿ ಜಮಖಂಡಿಯಲ್ಲಿ ಉದ್ಘಾನೆಯಾಗಿದ್ದು ಸಂತಸ ತಂದಿದೆ. ರಾಜ್ಯ ಸರ್ಕಾರ ನುಡಿದಂತೆ ನಡೆದು ಕೊಂಡಿದೆ. 58 ಸಾವಿರ ಕೋಟಿ ರು.ಗಳನ್ನು ಖರ್ಚು ಮಾಡಿ ಬಡವರಿಗೆ ಶಕ್ತಿ ತುಂಬುವ ಕೆಲಸಮಾಡುತ್ತಿದೆ ಎಂದರು.

ಸ್ತ್ರೀಶಕ್ತಿಯೋಜನೆಯಡಿ 2.29 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಸರ್ಕಾರ ₹55 ಕೋಟಿಗಳನ್ನ ಸಾರಿಗೆ ಸಂಸ್ಥೆಗೆ ಭರ್ತಿ ಮಾಡಿದೆ, ತಾಲೂಕಿನ 9.5ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಗೃಹ ಜೋತಿ ಯೋಜನೆಯಲ್ಲಿ 51419 ಮನೆಗಳಿಗೆ ಉಚಿತ ವಿದ್ಯುತ್‌ ನೀಡುತ್ತಿದ್ದು, ಇದಕ್ಕಾಗಿ ₹2.80 ಕೋಟಿಗಳನ್ನು ಸರ್ಕಾರ ತುಂಬುತ್ತಿದೆ ಎಂದು ತಿಳಿಸಿದರು.

ಈ ವೇಳೆ ಬಸವರಾಜ ಸಿಂಧೂರ, ವರ್ಧಮಾನ ನ್ಯಾಮಗೌಡ, ಶ್ರೀಶೈಲ ದಳವಾಯಿ ಮಾತನಾಡಿ, ಸರ್ಕಾರದ ಸಾಧನೆಯನ್ನು ತಿಳಿಸಿದರು. ನೂತನ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೋಮಿನ, ಮಲ್ಲಪ್ಪ ಚಾಮೋಜಿ, ಮಹೇಶ ಕೋರಿ, ಬಸವರಾಜ ನ್ಯಾಮಗೌಡ, ಈಶ್ವರ ವಾರೆಣ್ಣವರ, ಮಹಾದೇವ ಪಾಟೀಲ, ಶಶಿಗಲಗಲಿ, ಈಶ್ವರ ಕರಿಬಸವನವರ, ರಾಜು ಮೇಲಿನಕೇರಿ, ಅಜಯ ಕುಮಾರ ನಾಂದ್ರೇಕರ, ಮಹಾದೇವಿ ಕೆಬ್ಬಾನಿ, ಬಸು ಹರಕಂಗಿ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹೆಸ್ಕಾಂ ಮತ್ತು ತಾಪಂನ ಅಧಿಕಾರಿಗಳು ಇದ್ದರು. ತಾಪಂ ಸಿಇಓ ಸಂಜೀವ ಜುನ್ನೂರ ಸ್ವಾಗತಿಸಿದರು.

---

ಕೋಟ್‌

ಸರ್ಕಾರದ ಉಚಿತ ಯೋಜನೆಗಳನ್ನು ಟೀಕಿಸುವರು ಅಂಕಿ ಸಂಖ್ಯೆಗಳನ್ನು ನೋಡಲಿ, ಪ್ರಚಾರದ ಗೀಳಿಗೆ ಟೀಕೆ ಬೇಡ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅದೇಷ್ಟೋ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮಕ್ಕಳ ಫೀ, ಗೃಹಣಿಯರು ಮನೆಗೆ ಅಗತ್ಯ ವಸ್ತು ಹೀಗೆ ಅನೇಕ ವಿಧಗಳಿಂದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ.

-ಆನಂದ ನ್ಯಾಮಗೌಡ ಮಾಜಿ ಶಾಸಕ.

Share this article