ಯಲ್ಲಾಪುರ: ಸಾತ್ವಿಕ ಆಹಾರಗಳ ಸೇವನೆಯೊಂದಿಗೆ ಯೋಗ, ಸೂರ್ಯ ನಮಸ್ಕಾರ ಮತ್ತು ನಿತ್ಯ ದೇವತಾರಾಧನೆಗಳನ್ನು ಅಳವಡಿಸಿಕೊಂಡು ಸಾಗಿದರೆ ನಮ್ಮ ಬದುಕನ್ನು ಹಸನು ಮಾಡಿಕೊಳ್ಳಬಹುದು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಮ್ಮ ಆಹಾರ, ಆಚಾರ, ವಿಚಾರಗಳೆಲ್ಲವೂ ಆಧುನಿಕತೆಯತ್ತ ಸಾಗುತ್ತಿರುವುದೇ ಹಲವು ಅವಾಂತರಗಳಿಗೆ ಕಾರಣವಾಗುತ್ತಿವೆ. ಸಾತ್ವಿಕ ಜೀವನ, ಸಾತ್ವಿಕ ಆಹಾರ ಸೇವನೆ ಹಿಂದಿನಂತೆ ಇಲ್ಲವಾಗಿದೆ. ಅವೈಜ್ಞಾನಿಕವಾಗಿ, ಅತಿಯಾಗಿ ಕೃಷಿಗೆ ರಸಗೊಬ್ಬರ ಬಳಸಲಾಗುತ್ತಿದೆ. ಇದರಿಂದಲೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಹೇಳಿದರು.
ರೋಗಗಳ ಪರಿಹಾರಕ್ಕೆ ಮೃತ್ಯುಂಜಯನ ಆರಾಧನೆ ಹೇಳಲ್ಪಟ್ಟಿದೆ. ಏಕೆಂದರೆ ದೇವತೆಗಳು ಮತ್ತು ರಾಕ್ಷಸರು ಸಮುದ್ರಮಥನ ಮಾಡಿದ ಸಂದರ್ಭದಲ್ಲಿ ಉತ್ಪನ್ನಗೊಂಡ ವಿಷದಿಂದ ಎಲ್ಲರೂ ಭಯಭೀತರಾದರು. ಆಗ ಶಿವನು ವಿಷವನ್ನು ನುಂಗಿ ಭಯವನ್ನು ಪರಿಹರಿಸಿದ್ದರಿಂದಲೇ ವಿಷಕಂಠನೆಂದು ಕರೆಯಲಾಗುತ್ತದೆ ಎಂದು ಹೇಳಿದರು.ಪ್ರತಿಯೊಬ್ಬರ ಮನೆಯಲ್ಲಿಯೂ ಗೋಶಾಲೆಗಳನ್ನು ಮೊದಲಿನಂತೆ ನಿರ್ಮಿಸಬೇಕಿದೆ. ಇದರಿಂದಲೂ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು.
ದೇವಸ್ಥಾನದ ಪುರೋಹಿತ ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ. ರಾಮಚಂದ್ರ ಭಟ್ಟ ಸಣ್ಣೇಮನೆ ಸಾಂದರ್ಭಿಕ ಮಾತನಾಡಿದರು. ಸೀಮಾಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಸ್ವಾಗತಿಸಿದರು. ಚಂದ್ರಕಲಾ ಭಟ್ಟ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಆನಂತರ ಖ್ಯಾತ ಕಲಾವಿದರು ಪ್ರಸ್ತುತಪಡಿಸಿದ "ಗಾನನಾಟ್ಯ ವೈಭವ " ಕಲಾಸಕ್ತರನ್ನು ರಂಜಿಸಿತು.