ಭಟ್ಕಳ: ಏಕಾಂತದಲ್ಲಿ ಭಗವಂತನ ಸ್ಮರಣೆಯಿಂದ ಯಾವುದೇ ಭಯ ಇಲ್ಲ. ಭಗವಂತನ ನಿರಂತರ ಸ್ಮರಣೆಯಿಂದ ಶಕ್ತಿ ಅಭಿವೃದ್ಧಿಯಾಗಿ ಜೀವನ ಆನಂದಮಯವಾಗುತ್ತದೆ ಎಂದು ಧರ್ಮಸ್ಥಳದ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಈಗಾಗಲೇ ಆಯೋಧ್ಯೆ ಶಾಖಾ ಮಠ ಮಾಡಲಾಗುತ್ತಿದೆ. ಇದರಿಂದ ಉತ್ತರದ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗಲಿದೆ ಎಂದರು.
ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್. ವೈದ್ಯ ಮಾತನಾಡಿ, ಮನಸ್ಸಿನ ನೆಮ್ಮದಿಗಾಗಿ ಗುರುಗಳ ಆಶೀರ್ವಾದ ಬಹು ಮುಖ್ಯವಾಗಿದೆ. ಸದಾ ಒಳ್ಳೆಯದನ್ನೇ ಬಯಸುವ ಗುರುಗಳು ಭಕ್ತರು ದಾರಿ ತಪ್ಪಿದಾಗ ಅವರನ್ನು ಸರಿಪಡಿಸುವ ಶಕ್ತಿ ಇರುವುದು ಗುರುಗಳಿಗೆ ಮಾತ್ರ, ಗುರು ಸೇವೆಯನ್ನು ಭಕ್ತಿಯಿಂದ ಮಾಡಿದರೆ ಅದು ವ್ಯರ್ಥ ಆಗಲು ಸಾಧ್ಯವಿಲ್ಲ ಎಂದರು.ಕಾರ್ಯಕ್ರಮದಲ್ಲಿದ್ದ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ, ಕಿಯೋನಿಕ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಹರಿಕೃಷ್ಣ ಭಂಟ್ವಾಳ, ಜೆಡಿಎಸ್ ಮುಖಂಡ ಸೂರಜ್ ಸೋನಿ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿದರು. ಶ್ರೀರಾಮ ಕ್ಷೇತ್ರದ ಟ್ರಸ್ಟಿ ಕಂಕನಾಡಿ ಗರಡಿ ಅಧ್ಯಕ್ಷ ಚಿತ್ತರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಪ ಸದಸ್ಯ ಕೆ. ಹರೀಶಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಭಟ್ಕಳ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅರುಣಾ ನಾಯ್ಕ, ಭಟ್ಕಳ ಸಾರದಹೊಳೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ ಮುಂತಾದವರಿದ್ದರು.
ಕಾರ್ಯಕ್ರಮದ ಮೊದಲು ರಾಮ ದೇವರಿಗೆ ವಿಶೇಷ ಪೂಜೆ, ನಿತ್ಯಾನಂದ ಮಂದಿರದಲ್ಲಿ ರಾಮ ತಾರಕ ಯಜ್ಞ, ವಿಶೇಷ ಪೂಜೆ ನಡೆಯಿತು. ನಂತರ ಸ್ವಾಮೀಜಿ ಯವರ ಪೀಠಾರೋಹಣಾ, ಕಿರೀಟ ಧಾರಣೆ, ಪಾದಪೂಜೆ ಮಹೇಶ್ ಶಾಂತಿ, ಲೋಕೇಶ್ ಶಾಂತಿ ಮತ್ತು ಬಳಗದವರಿಂದ ನಡೆಯಿತು.