(ಟಿಂಟ್‌) ಉತ್ತಮ ಶಿಕ್ಷಣದಿಂದ ಜೀವನ ಸುಗಮ

KannadaprabhaNewsNetwork | Published : Aug 6, 2024 12:41 AM

ಸಾರಾಂಶ

ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರನ್ನು ಪುರಸ್ಕರಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ವಿದ್ಯಾರ್ಥಿಗಳು ಶಿಕ್ಷಣ ಪಡೆದು ಜ್ಞಾನ ಸಂಪಾದಿಸುವುದರಿಂದ ಅವರ ಮುಂದಿನ ಜೀವನ ಸುಗಮವಾಗಿರುತ್ತದೆ ಎಂದು ಹಿರಿಯ ಪತ್ರಕರ್ತ, ತಾಲೂಕು ಮಡಿವಾಳ ಮಾಚಿದೇವ ಸಂಘದ ಮಾಜಿ ಕಾರ್ಯದರ್ಶಿ ಎನ್.ಕೆ.ತಿಪ್ಪೇಸ್ವಾಮಿ ಹೇಳಿದರು.ಪಟ್ಟಣದ ತಾಲೂಕು ಕನ್ನಡ ಭವನದಲ್ಲಿ ಭಾನುವಾರ ಮಡಿವಾಳ ಸಮುದಾಯದ ಮಕ್ಕಳಿಗಾಗಿ ನಡೆದ ಚಿತ್ರದುರ್ಗ ಮತ್ತು ದಾವಣಗೆರೆ ಅಂತರ್ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಡಿವಾಳ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ. ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಜೀವನದಲ್ಲಿ ಯಶಸ್ಸುಗಳಿಸಿ ಹೆತ್ತ ತಂದೆ-ತಾಯಿಗಳಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸೇನಾ ಪಡೆಯ ಅಧ್ಯಕ್ಷ ಮೀರಸಾಬಿಹಳ್ಳಿ ಶಿವಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಬಹುಮುಖ ಪ್ರತಿಭೆಯಿದ್ದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಅಂಕಗಳ ಜೊತೆಗೆ ವಿವಿಧ ಚಟುವಟಿಕೆಗಳನ್ನು ಬೆಳೆಸಿಕೊಂಡರೆ ಸರ್ವೋತೋಮುಖ ಪ್ರಗತಿ ಕಾಣಬಹುದು ಎಂದರು.

ಸಾಧನೆ ಎಂಬುದು ಒಂದು ತಪ್ಪಸ್ಸು ಆಗಬೇಕು ವೃತ್ತಿ ಪಡೆದ ನಂತರ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವ ಸಮಾಜ ಸೇವಕರು, ಸಮಾಜ ಸುಧಾರಕರು ಮತ್ತು ತಂದೆ ತಾಯಿ ಕುಟುಂಬಸ್ಥರನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಮಾದರಿ ವ್ಯಕ್ತಿಯಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಗುಪ್ತವಾರ್ತೆ ವಿಭಾಗದ ನಿವೃತ್ತ ಪೋಲೀಸ್ ಅಧಿಕಾರಿ ದಾವಣಗೆರೆಯ ಮಹಂತೇಶ್ ಟಿ, ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಹೋಳಲ್ಕೆರೆ ಸಿಅರ್‌ಪಿಸಿ ವೀರೇಶ್, ಶ್ರೀರಾಮ ಹೌಸಿಂಗ್ ಫೈನಾನ್ಸ್ ಶಾಖಾ ವ್ಯವಸ್ಧಾಪಕ ಎಸ್.ಲಕ್ಷ್ಮೀ ಸಾಗರ್‌, ಸೇನಾ ಪಡೆಯ ಕಾರ್ಯಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಅವರು ವಿವಿಧ ವಿಷಯಗಳ ಕುರಿತು ಮಾತನಾಡಿದರು.

ಈ ವೇಳೆ ಸೇನಾಪಡೆಯ ಗೌರವಾಧ್ಯಕ್ಷ ಬೆನಕನಹಳ್ಳಿ ಶಿವಣ್ಣ, ನಿವೃತ್ತ ಹಿರಿಯ ಪಶುವೈಧ್ಯ ಪರೀಕ್ಷಕ ಎಂ.ಎಚ್. ತಿಪ್ಪೇಸ್ವಾಮಿ (ದೇವರಮರಿಕುಂಟೆ) ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಓಂಕಾರಪ್ಪ, ಆರೋಗ್ಯ ಇಲಾಖೆಯ ಹರೀಶ್, ಸ್ಟುಡಿಯೋ ಬಸವರಾಜ್, ಕೆ.ರಂಗಪ್ಪ. ಮತ್ತಿತರರು ಭಾಗವಹಿಸಿದ್ದರು.

Share this article