ಕನ್ನಡಪ್ರಭ ವಾರ್ತೆ ಗೋಕರ್ಣ
ಅನಾವರಣ ಚಾತುರ್ಮಾಸ್ಯದ ನಾಲ್ಕನೇ ದಿನವಾದ ಬುಧವಾರ ೫೦ನೇ ಶ್ರೀವರ್ಧಂತಿ ಸಂದರ್ಭದಲ್ಲಿ ಕಾಲ ಎಂಬ ವಿಷಯದ ಬಗ್ಗೆ ಆಶೀರ್ವಚನ ನೀಡಿದರು.
ಜನನ- ಮರಣದ ಆಚೆಗೆ ಪರಮ ಸುಖದ ಪ್ರಪಂಚವಿದೆ. ಜನನ- ಮರಣ ಮತ್ತೆ ಬರದಂಥ ಮುಕ್ತಿಯನ್ನು ಹಲವು ಮಂದಿಗೆ ಕರುಣಿಸುವಂಥ ಅವಕಾಶವನ್ನು ನಮಗೆ ಕಲ್ಪಿಸು ಎಂದು ಪ್ರಾರ್ಥಿಸಿಕೊಳ್ಳೋಣ. ಮತ್ತೆ ಹುಟ್ಟಿ ಬರದಂಥ ಬದುಕನ್ನು ಈ ಜನ್ಮದಲ್ಲಿ ಚೆನ್ನಾಗಿ ಬಾಳುವಂತಾಗಲಿ. ಮತ್ತೆ ಹುಟ್ಟದಂಥ ಬದುಕು ನಮ್ಮದಾಗಲಿ. ಅತಿಶಯ ಬದುಕನ್ನು ಬಾಳೋಣ. ದೋಷರಹಿತ ಬದುಕನ್ನು ಕರುಣಿಸುವಂತಾಗಲಿ ಎಂದು ಆಶಿಸಿದರು.ದೃಢ ಕರ್ಮ, ಅದೃಢ ಕರ್ಮ ಮತ್ತು ದೃಢಾದೃಢ ಕರ್ಮಗಳು ಪ್ರತಿಯೊಬ್ಬನ ಜೀವನದಲ್ಲೂ ಇವೆ. ಅದೃಢ ಕರ್ಮವನ್ನು ಅಲ್ಪ ಪ್ರಯತ್ನದಿಂದ ಬದಲಾಯಿಸಿಕೊಳ್ಳಬಹುದು. ಆದರೆ ದೃಢಾದೃಢ ಕರ್ಮವನ್ನು ಬದಲಿಸಲು ಹೆಚ್ಚಿನ ಪ್ರಯತ್ನ ಬೇಕು. ದೃಢಕರ್ಮಗಳನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ, ಅದನ್ನು ಎದುರಿಸಲು ಸಜ್ಜಾಗಬಹುದು. ಇದನ್ನು ನಮಗೆ ತಿಳಿಯುವಂತೆ ಮಾಡುವುದೇ ಜ್ಯೋತಿಷ್ಯ ಎಂದರು.
ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾಲ ಘಳಿಗೆಗಳನ್ನು ಲೆಕ್ಕ ಹಾಕಿದ್ದರು. ಅಚಾತುರ್ಯದಿಂದ ಹುಕ್ಕಬುಕ್ಕರು ಸ್ವಲ್ಪಮೊದಲೇ ಅಡಿಗಲ್ಲು ಇಟ್ಟ ಪರಿಣಾಮವಾಗಿ ಸಾವಿರಾರು ವರ್ಷ ಬಾಳಬೇಕಾದ ವಿಜಯನಗರ ಸಾಮ್ರಾಜ್ಯ ಕೆಲವೇ ನೂರು ವರ್ಷಗಳಲ್ಲಿ ಅಳಿಯುವಂತಾಯಿತು ಎಂದರು.
ಹೊರನಾಡಿನ ಧರ್ಮದರ್ಶಿ ಭೀಮೇಶ್ವರ ಜೋಶಿ ದಂಪತಿ ವರ್ಧಂತಿ ದಿನದ ಭಿಕ್ಷಾಸೇವೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಶ್ರೀಮಠದ ಅವಿಚ್ಛಿನ್ನ ಪರಂಪರೆಯ ೩೩ನೇ ಯತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ರಚಿಸಿದ ಉತ್ತರ ಸಹ್ಯಾದ್ರಿಯೊಳಗಿನ ಹವ್ಯಕ, ದ್ರಾವಿಡ ಬ್ರಾಹ್ಮಣರ ಉತ್ಪತ್ತಿಯ ಇತಿಹಾಸವು ಎಂಬ ಕೃತಿಯ ಅನಾವರಣವನ್ನು ಶ್ರೀಪರಿವಾರದ ಕೆ.ವಿ. ರಮೇಶ್ ನೆರವೇರಿಸಿದರು.
ವಿಜಯಲಕ್ಷ್ಮಿ ದೀಪ ಪ್ರಜ್ವಲನೆ ನೆರವೇರಿಸಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಮಧು ಜಿ.ಕೆ. ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ, ಮೋಹನ ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು.