ಗದಗ: ಪುಣ್ಯ ಕಾರ್ಯಗಳಿಂದ ಆತ್ಮಶುದ್ಧಿಯಾಗುತ್ತದೆ. ವಚನ ಬಹಿರಂಗ ಸಾಧನವಾದರೆ, ಉಪದೇಶ ಅಂತರಂಗದ ಸಾಧನವಾಗಿದೆ. ಶ್ರೀ ಗುರುಗಳ ವಚನೋಪದೇಶವನ್ನು ಆಲಿಸಿದಾಗ ಮುಕ್ತಿ ದೊರೆಯುತ್ತದೆ ಎಂದು ರನ್ನಬೆಳಗಲಿಯ ಸಿದ್ಧಾರೂಢ ಮಠದ ಶ್ರೀ ಕೃಷ್ಣೇಗೌಡ ಕೋಲೂರು ಹೇಳಿದರು.
ಕರಿಕಟ್ಟಿಯ ಕುಮಾರಶಾಸ್ತ್ರಿಗಳು ಹಿರೇಮಠ ಮಾತನಾಡಿ, ಯೋಗ ಮಾಡಿದರೆ ಶರೀರ ಗಟ್ಟಿಯಾಗುತ್ತದೆ. ಶಿವಯೋಗ ಮಾಡಿದರೆ ಆತ್ಮ ಗಟ್ಟಿಯಾಗುತ್ತದೆ. ಜೈಲಿನಿಂದ ಬಿಡುಗಡೆಯಾಗುವುದು ಮುಕ್ತಿಯಲ್ಲ, ಸಾಲದಿಂದ ಮುಕ್ತನಾಗುವುದು ಮುಕ್ತಿಯಲ್ಲ, ರೋಗದಿಂದ ಮುಕ್ತನಾಗುವುದು ಮುಕ್ತಿಯಲ್ಲ, ಗುರುವಿನ ವಚನೋಪದೇಶದಿಂದ ಜೀವನಮುಕ್ತನಾಗಬೇಕು, ಅಂದಾಗ ಮುಕ್ತಿ ಸಿಗುತ್ತದೆ ಎಂದು ಹೇಳಿದರು.
ಬ್ರಹನ್ಮಠ-ರಾಜೂರ-ಅಡ್ನೂರ- ಗದಗ ದಾಸೋಹ ಶ್ರೀಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ, ಶಿವನ ಸಾಯುಜ್ಯ ಪಡೆಯಲು ಅಂತರಂಗ ಶುದ್ಧಿಯಾಗಬೇಕು. ಗಡಗಿಯೊಳಗಿರುವ ಹೆಂಡದ ವಾಸನೆ ಹೋಗಬೇಕಾದರೆ ಗಡಗಿ ಒಳಗೆ ತೊಳೆಯಬೇಕು. ಹೊರಗೆ ತೊಳೆದರೆ ಹೆಂಡದ ವಾಸನೆ ಹೋಗುವುದಿಲ್ಲ. ಅದೇ ರೀತಿ ದೇಹ ಎನ್ನುವ ಗಡಗಿಯನ್ನು ಅಂತರಂಗದ ಒಳಗೆ ತೊಳೆದಾಗ ಮನ, ದೇಹ ಶುದ್ಧಿಯಾಗುತ್ತದೆ. ಮನುಷ್ಯ ಜೀವನ ಮುಕ್ತನಾಗಬೇಕಾದರೆ ಶಿವಯೋಗ ಸಾಧನ ಬೇಕೆಂದು ತಿಳಿಸಿದರು.ಈ ವೇಳೆ ರನ್ನ ಬೆಳಗಲಿಯ ಮಹಾಲಿಂಗ ಶಾಸ್ತ್ರಿಗಳು ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ರಘುನಂದ ಶಾಸ್ತ್ರಿಗಳು ಅರಳಗುಂಡಿಗಿ ಸ್ವಾಗತಿಸಿದರು. ಕದಮನಹಳ್ಳಿಯ ಪಂಚಾಕ್ಷರಿ ಶಾಸ್ತ್ರೀಗಳು ಹಾಗೂ ಸೋಮನಾಳದ ಸಿದ್ರಾಮಯ್ಯ ಶಾಸ್ತ್ರಿಗಳು ನಿರೂಪಿಸಿದರು.