ತಂದೆ-ತಾಯಿ ಸೇವೆಯಿಂದ ಬದುಕು ಸಾರ್ಥಕ: ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Oct 24, 2025, 01:00 AM IST
23ಕೆಎಂಎನ್‌ಡಿ-7ಮಂಡ್ಯದ ಕರ್ನಾಟಕ ಸಂಘದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ವಿದ್ಯಾವಂತರೇ ಇಂದು ವೃದ್ಧಾಪ್ಯದಲ್ಲಿರುವ ತಂದೆ-ತಾಯಿಯನ್ನು ಅನಾಥಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಅವರು ಒಂಟಿಯಾಗಿ ಜೀವನ ನಡೆಸುವಂತಹ ಪರಿಸ್ಥಿತಿ ತಂದೊಡ್ಡುತ್ತಿದ್ದಾರೆ. ಅವರನ್ನು ಆರೈಕೆ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಇದು ಒಳ್ಳೆಯ ಸಂಸ್ಕಾರವಲ್ಲ. ತಂದೆ-ತಾಯಿಯ ಕಣ್ಣಲ್ಲಿ ನೀರು ತರಿಸುವ ಮಕ್ಕಳು ಬದುಕಿದ್ದೂ ಸತ್ತಂತೆಯೇ.

ಕನ್ನಡಪ್ರಭ ವಾರ್ತೆ ಮಂಡ್ಯ

ತಂದೆ-ತಾಯಿ, ಹಿರಿಯರ ಸೇವೆ ಮಾಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಅವರು ಇನ್ನಷ್ಟು ದಿನ ಬದುಕುವ ವಾತಾವರಣವನ್ನು ಸೃಷ್ಟಿಸಿಕೊಡಬೇಕು. ಅದರ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿವಿಮಾತು ಹೇಳಿದರು.

ಕರ್ನಾಟಕ ಸಂಘದಿಂದ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಬಿ.ಎಚ್.ಮಂಗೇಗೌಡ ಶಿಕ್ಷಣ, ನಂಜಮ್ಮ ಸಮಾಜ ಸೇವಾ, ಮೋಟೇಗೌಡ ಕೃಷಿ, ಕೆ.ಟಿ.ಶ್ರೀಕಂಠೇಗೌಡ ಶಿಕ್ಷಕ ಪ್ರಶಸ್ತಿ ಹಾಗೂ ಕೆ.ಎಲ್.ಅರುಣ್ ಸ್ಮರಣಾರ್ಥ ವಿದ್ಯಾರ್ಥಿ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾವಂತರೇ ಇಂದು ವೃದ್ಧಾಪ್ಯದಲ್ಲಿರುವ ತಂದೆ-ತಾಯಿಯನ್ನು ಅನಾಥಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಅವರು ಒಂಟಿಯಾಗಿ ಜೀವನ ನಡೆಸುವಂತಹ ಪರಿಸ್ಥಿತಿ ತಂದೊಡ್ಡುತ್ತಿದ್ದಾರೆ. ಅವರನ್ನು ಆರೈಕೆ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಇದು ಒಳ್ಳೆಯ ಸಂಸ್ಕಾರವಲ್ಲ. ತಂದೆ-ತಾಯಿಯ ಕಣ್ಣಲ್ಲಿ ನೀರು ತರಿಸುವ ಮಕ್ಕಳು ಬದುಕಿದ್ದೂ ಸತ್ತಂತೆಯೇ ಎಂದು ಅಭಿಪ್ರಾಯಪಟ್ಟರು.

ತಂದೆ-ತಾಯಿಯ ಸೇವೆ ಮಾಡದೆ, ಗುರು-ಹಿರಿಯರನ್ನು ಗೌರವದಿಂದ ಕಾಣದವರು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಬೆಲೆ ಇರುವುದಿಲ್ಲ. ಅವರ ಬದುಕು ವ್ಯರ್ಥ. ಹಾಗಾಗಿ ಹಿರಿಯರನ್ನು ಗೌರವಿಸುವ ಮನೋಭಾವವನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಬೆಳೆಸಬೇಕು. ಒಳ್ಳೆಯ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.

ಯಾರೂ ನಿರೀಕ್ಷೆ ಮಾಡದ ಕೋವಿಡ್ ನಮ್ಮನ್ನು ಆವರಿಸಿದ ಸಂದರ್ಭದಲ್ಲಿ ಎಲ್ಲರೂ ಏನೆಲ್ಲಾ ಅನುಭವಿಸಿದ್ದರು ಎಂಬುದನ್ನು ವಿವರಿಸಿದ ಅವರು, ಕೋವಿಡ್ ಸೋಂಕಿಗೆ ಒಳಗಾದ ತಂದೆ-ತಾಯಿಯರನ್ನು ಮಕ್ಕಳು ನೋಡಿಕೊಳ್ಳಲಾಗದ ಪರಿಸ್ಥಿತಿಯನ್ನೂ ನೋಡಿದ್ದೇವೆ. ಜೊತೆಗೆ ಸೋಂಕು ಇದ್ದು ಆರೋಗ್ಯವಾಗಿದ್ದರೂ ಅಂತಹ ಹಿರಿಯರನ್ನು ಮನೆಗೆ ಕರೆದೊಯ್ಯಲು ಹಿಂದೇಟು ಹಾಕಿದಂತಹ ವ್ಯವಸ್ಥೆಯನ್ನೂ ಕೇಳಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ನನ್ನ ತಾಯಿಯನ್ನು ಬಹು ಬೇಗನೆ ಕಳೆದುಕೊಳ್ಳಬೇಕಾಯಿತು. ಆ ವೇಳೆ ನನ್ನ ಚಿಕ್ಕಮ್ಮ ನಮ್ಮನ್ನು ಸಾಕಿ ಬೆಳೆಸಿದ್ದರು. ಅವರ ಸೇವೆ ಮಾಡಿದ್ದು ನನಗೆ ಸಮಾಧಾನ ತಂದಿದೆ. ಎಲ್ಲರೂ ಹಿರಿಯರ ಸೇವೆ ಮಾಡಬೇಕು. ಅವರು ಇನ್ನಷ್ಟು ದಿನ ಬದುಕುವಂತಹ ವಾತಾವರಣ ನಿರ್ಮಿಸಿಕೊಡಬೇಕು. ಇದರಿಂದ ಮನೆಯೂ ಆನಂದದಿಂದ ತುಂಬಿರುತ್ತದೆ ಎಂದು ಉದಾಹರಣೆ ಸಮೇತ ವಿವರಿಸಿದರು.

ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್. ಆತ್ಮಾನಂದ ಮಾತನಾಡಿ, ಕರ್ನಾಟಕ ಸಂಸ್ಕೃತಿ, ಸಂಸ್ಕಾರದ ಆಗರವಾಗಿದೆ. ಅನೇಕ ಹಿರಿಯರು ಇದಕ್ಕೆ ಸಾಥ್ ನೀಡಿದ್ದಾರೆ. ಅವರನ್ನು ಗೌರವಿಸುವ ಕೆಲಸ ಮಾಡುವುದು ನಮ್ಮ ಜವಾಬ್ಹಾರಿ ಎಂದರು.

ಮದ್ದೂರಿನ ಎಂ.ಎಚ್. ಚನ್ನೇಗೌಡ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಪ್ರಶಸ್ತಿ, ಕೆ.ರಾಜಶೇಖರಯ್ಯ ಅವರಿಗೆ ನಂಜಮ್ಮ ಸೇವಾ ಪ್ರಶಸ್ತಿ, ಎನ್.ಎಂ. ಶಿವಪ್ರಕಾಶ್ ಅವರಿಗೆ ಶಿಕ್ಷಕ ಪ್ರಶಸ್ತಿ, ಬಿಳಿಗೌಡ ಅವರಿಗೆ ಮೋಟೇಗೌಡ ಕೃಷಿ ಪ್ರಶಸ್ತಿ, ಕೊಪ್ಪ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್.ಬಿಂದುಶ್ರೀ ಹಾಗೂ ಎಚ್.ಎಲ್. ಪಲ್ಲವಿ, ಸಿ. ಹಂಸವೇಣಿ, ಸಿ.ಜೆ. ಚೈತ್ರ ಅವರಿಗೆ ಕೆ.ಎಲ್. ಅರುಣ್ ಸ್ಮರಣಾರ್ಥ ವಿದ್ಯಾರ್ಥಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ, ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ