ಕನ್ನಡಪ್ರಭ ವಾರ್ತೆ ಮಂಡ್ಯ
ಬೆಳಗೊಳದ ಹಿಂದಿನ ರಾಜಸ್ವ ನಿರೀಕ್ಷಕ ಜಯರಾಮಮೂರ್ತಿ ಹಾಗೂ ಹಿಂದಿನ ಗ್ರಾಮ ಆಡಳಿತ ಅಧಿಕಾರಿ ಪುಟ್ಟಸ್ವಾಮಿ ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಅನುಮತಿ ನೀಡಿದೆ. ಆದರೆ, ಜಯರಾಮಮೂರ್ತಿ ಅವರ ನರರೋಗದಿಂದ ಬಳಲುತ್ತಿರುವುದರಿಂದ ಪ್ರಾಸಿಕ್ಯೂಷನ್ ಅನುಮತಿ ನೀಡಿದರೂ ವಿಚಾರಣೆಗೆ ಸಹಕರಿಸಲು ಸಾಧ್ಯವಿಲ್ಲದಿರುವುದರಿಂದ ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವುದರಿಂದ ಕೈಬಿಡಲಾಗಿದೆ.
ಬೆಳಗೊಳ ಸರ್ವೇ ನಂ.೪೪ರಲ್ಲಿರುವ ೨.೧೩ ಎಕರೆ ವಿಸ್ತೀರ್ಣದ ಪೈಕಿ ೧೪ ಗುಂಟೆ ವಿಸ್ತೀರ್ಣ ಕಾವೇರಿ ನೀರಾವರಿ ನಿಗಮಕ್ಕೆ ನಾಲಾ ಜಾಗ ಎಂದು ಭೂಸ್ವಾಧೀನವಾಗಿದೆ. ಈ ಜಾಗವನ್ನೂ ಸಹ ಸೇರಿಸಿ ವಸತಿ ಉದ್ದೇಶಕ್ಕಾಗಿ ಅಕ್ರಮವಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ, ಸುಳ್ಳು ದಾಖಲೆಗಳನ್ನು ನೀಡಿ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ವೀರಭದ್ರಯ್ಯನವರಿಗೆ ಭೂಪರಿವರ್ತನೆ ಮಾಡಲಾಗಿದೆ. ಹಾಗಾಗಿ ಇವರ ವಿರುದ್ಧ ಭೂ ಕಂದಾಯ ಕಾಯಿದೆ ೧೯೬೪ರ ಕಲಂ ೧೯೨ ಎ ಮತ್ತು ೯೫ರಂತೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ಬೆಳಗೊಳ ರಾಜಸ್ವ ನಿರೀಕ್ಷಕ ಸಿ.ಬಸವರಾಜು ಕೆ ಆರ್ ಸಾಗರ ಪೊಲೀಸರಿಗೆ ದೂರು ನೀಡಿದ್ದರು.ಈ ವಿಚಾರವಾಗಿ ನೌಕರರನ್ನು ವಿಚಾರಣೆಗೊಳಪಡಿಸಿದಾಗ ಪುಟ್ಟಸ್ವಾಮಿ ಅವರು ಭೂ ಪರಿವರ್ತನೆ ಸಂಬಂಧ ಅರ್ಜಿದಾರರ ಸಮಕ್ಷಮದಲ್ಲಿ ಮಹಜರ್ ಜರುಗಿಸಿ ತಾವು ಮಹಜರ್‌ಗೆ ಸಹಿ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಕಾವೇರಿ ನೀರಾವರಿ ನಿಗಮಕ್ಕೆ ೧೪ ಗುಂಟೆ ವಿಸ್ತೀರ್ಣ ಭೂ ಸ್ವಾಧೀನವಾಗಿದ್ದರೂ ನಮೂದಿಸದಿರುವುದು ಕರ್ತವ್ಯಲೋಪಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಹಿಂದಿನ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗ ಪುಟ್ಟಸ್ವಾಮಿ ಅವರನ್ನು ಅಭಿಯೋಜನೆ (ಪ್ರಾಸಿಕ್ಯೂಷನ್)ಗೆ ಒಳಪಡಿಸಲು ಅನುಮತಿ ನೀಡುವಂತೆ ಕೆ ಆರ್ ಸಾಗರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಿದ್ದರು.
ಜಮೀನಿನ ಸ್ಥಳ ತನಿಖೆ ನಡೆಸಿ ವಸ್ತುಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದು ಭೂ ಪರಿವರ್ತನೆಗೆ ಶಿಫಾರಸು ಮಾಡದೆ ಪೂರ್ತಿ ೨.೧೩ ಎಕರೆ ಜಮೀನಿಗೆ ಭೂ ಪರಿವರ್ತನೆ ಮಾಡಲು ರಾಜಸ್ವ ನಿರೀಕ್ಷಕರಾಗಿದ್ದ ಜಯರಾಮಮೂರ್ತಿ ಹಾಗೂ ಗ್ರಾಮಲೆಕ್ಕಿಗ ಪುಟ್ಟಸ್ವಾಮಿ ಸಲ್ಲಿಸಿ ಕರ್ತವ್ಯಲೋಪವೆಸಗಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಲಾಗಿದೆ.