ಸತ್ಯ, ಅಹಿಂಸೆಯ ಪಾಲನೆಯಿಂದ ಜೀವನ ಸಾರ್ಥಕ: ವೀರಪ್ಪ ಮೊಯಿಲಿ

KannadaprabhaNewsNetwork |  
Published : Feb 28, 2024, 02:33 AM IST
ಧಾರ್ಮಿಕ ಸಭೆ | Kannada Prabha

ಸಾರಾಂಶ

ಯುಗಳ ಮುನಿಗಳಾದ ಪೂಜ್ಯ ಅಮೋಘಕೀರ್ತಿ ಮುನಿ ಮಹಾರಾಜರು ಮತ್ತು ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪ್ರಾಚೀನ ಇತಿಹಾಸ, ನಾಗರಿಕತೆ ಮತ್ತು ಸಂಸ್ಕೃತಿಯ ಅಧ್ಯಯನದಿಂದ ನಾವು ದುರ್ಗುಣಗಳನ್ನು ತ್ಯಜಿಸಿ ಉತ್ತಮ ಸಂಸ್ಕಾರದಿಂದ ಮಾನವೀಯತೆಯೊಂದಿಗೆ ಸಾರ್ಥಕ ಜೀವನ ನಡೆಸಬಹುದು. ಸತ್ಯ ಮತ್ತು ಅಹಿಂಸೆಯ ಪಾಲನೆಯಿಂದ ಜೀವನ ಪಾವನವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು.

ಅವರು ವೇಣೂರಿನಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ 6ನೇ ದಿನವಾದ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶ ಮತ್ತು ಭಾಷೆಯ ಸೀಮೆಯನ್ನು ಮೀರಿ, ಬಾಹುಬಲಿಯ ಜೀವನ ಸಿದ್ಧಾಂತವನ್ನು ನಾವು ಅನುಸರಿಸಿದಲ್ಲಿ ದಾನವ ಗುಣಗಳನ್ನು ತ್ಯಜಿಸಿ ಆದರ್ಶ ಮಾನವರಾಗಿ ಉತ್ತಮ ಜೀವನ ನಡೆಸಬಹುದು. ಪ್ರತಿದಿನ ತಾನು ಬೆಳಗ್ಗೆ ಬೇಗನೆ ಎದ್ದು ನೇಮಿಚಂದ್ರ ಕವಿ ರಚಿಸಿದ ಗೊಮ್ಮಟ ಸ್ತುತಿಯನ್ನು ಓದುವುದಾಗಿ ತಿಳಿಸಿದ ಮೊಯಿಲಿ ಅವರು, ಇದರಿಂದಾಗಿ ಮನಸು ಪವಿತ್ರವಾಗುತ್ತದೆ. ಆದರ್ಶ ಮಾನವೀಯ ಮೌಲ್ಯಗಳು ಮೂಡಿಬರುತ್ತವೆ. ಜೈನರ ಪ್ರಭಾವದಿಂದ ತಾನು ಶುದ್ಧ ಸಸ್ಯಾಹಾರಿಯಾಗಿದ್ದು ನಿರಂತರ ಧಾರ್ಮಿಕ ಗ್ರಂಥಗಳ ಅಧ್ಯಯನ ಮತ್ತು ಸಂಶೋಧನೆಯನ್ನು ಏಕಾಗ್ರತೆಯಿಂದ ಮಾಡುತಿದ್ದೇನೆ ಎಂದರು.

ಯುಗಳ ಮುನಿಗಳಾದ ಪೂಜ್ಯ ಅಮೋಘಕೀರ್ತಿ ಮುನಿ ಮಹಾರಾಜರು ಮತ್ತು ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು. ಮೂಡುಬಿದಿರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಬೆಳ್ಳಿಬೀಡು ಮತ್ತು ಜೈನ ಮಠದ ಮಧ್ಯೆ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು. ಸೇವಾಕರ್ತರನ್ನು ಗೌರವಿಸಲಾಯಿತು.

ಡಾ.ಎಂ.ಎನ್. ರಾಜೇಂದ್ರಕುಮಾರ್, ಡಾ. ಪದ್ಮಪ್ರಸಾದ ಅಜಿಲ, ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಪಿ. ಜಯರಾಜ ಕಂಬಳಿ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಮತ್ತು ಎಂ.ಸಿ.ಎಸ್. ಬ್ಯಾಂಕ್‌ನ ಸಿ.ಇ.ಒ.ಚಂದ್ರಶೇಖರ ಉಪಸ್ಥಿತರಿದ್ದರು.

ಕೆ. ಹೇಮರಾಜ್ ಬೆಳ್ಳಿಬೀಡು ಸ್ವಾಗತಿಸಿದರು. ಸ್ಮಿತೇಶ್ ಪತ್ರಾವಳಿ ವಂದಿಸಿದರು. ಮಹಾವೀರ್ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು.

ಇಂದಿನ ಕಾರ್ಯಕ್ರಮಗಳು

ಯುಗಳ ಮುನಿಗಳ, ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ವರೂರು ಜೈನಮಠದ ಶ್ರೀ ಧರ್ಮಸೇನ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಶ್ರೀ ಕ್ಷೇತ್ರ ಕೊಲ್ಲಾಪುರ ಜೈನ ಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಭಟ್ಟಾಚಾರ್ಯವರ್ಯ ಇವರ ಸಾನಿಧ್ಯದಲ್ಲಿ ನಿತ್ಯವಿಧಿ ಸಹಿತ ಯಾಗಮಂಡಲ, ಆರಾಧನಾ ವಿಧಾನ, ರಾಜ್ಯಾಭಿಷೇಕ, ರಾಜ್ಯಭಾರ, ಸಂಜೆ 4.05ರ ಕರ್ಕಾಟಕ ಲಗ್ನದಲ್ಲಿ ವೈರಾಗ್ಯಪೂರ್ವಕ ದೀಕ್ಷಾ ವಿಧಿ, ಕೇಶಲೋಚನಾ ವಿಧಿ, ಪರಿಷ್ಕರಣ ಕಲ್ಯಾಣ, ಆಗ್ರೋದಕ ಮೆರವಣಿಗೆ ನಡೆದು ಸಂಜೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ ಜರುಗಲಿದೆ. ಸಂಜೆ 3 ಗಂಟೆಗೆ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಹಿಸಲಿದ್ದಾರೆ. ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಚೆನ್ನೈನ ಐ‌.ಎ.ಎಫ್. ಗ್ರೂಪ್ ಕ್ಯಾಪ್ಟನ್ ವೀರಚಕ್ರ ಅಭಿನಂದನ್ ವರ್ಧಮಾನ್, ಜೈಪುರದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಉಮೇಶ ಭಂಡಾರಿ, ಬೆಂಗಳೂರು ಗ್ರೀನ್ ಚೆಫ್ ಸ್ಥಾಪಕಾಧ್ಯಕ್ಷ ಸುಖಲಾಲ್ ಜೈನ್, ಬೆಂಗಳೂರಿನ ಮೈಕ್ರೋ ಲ್ಯಾಬ್ ಅಧ್ಯಕ್ಷ ದಿಲೀಪ್ ಸುರಾನ್, ಉಜಿರೆ ಎಸ್‌ಡಿಎಂ ಸೊಸೈಟಿಯ ಪ್ರಾಜೆಕ್ಟ್ ಡೈರೆಕ್ಟರ್ ಶ್ರೇಯಸ್ ಕುಮಾರ್, ಉದ್ಯಮಿ ಕಿರಣ್ ಜೈ ಆಹ್ವಾನಿತ ಗಣ್ಯರಾಗಿ ಭಾಗವಹಿಸಲಿದ್ದಾರೆ.

ಲೇಖಕಿ, ಪ್ರಾಧ್ಯಾಪಕಿ ಡಾ. ಪದ್ಮಿನಿ ನಾಗರಾಜ್ ವಿಶ್ವಧರ್ಮವಾದ ಜೈನ ಧರ್ಮದ ಪ್ರಸ್ತುತತೆ ಈ ವಿಷಯದ ಕುರಿತು ಉಪನ್ಯಾಸ ನೀಡುವರು. ಸಂಜೆ ಸೇವಾಕರ್ತರಿಂದ ಧಾರ್ಮಿಕ ವಿಧಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂಗೀತ ಸುಧೆ,ಭರತನಾಟ್ಯ, ತುಳುನಾಡ ವೈಭವ ಮೊದಲಾದ ಕಾರ್ಯಕ್ರಮಗಳು ಜರುಗಲಿವೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...