ಕನ್ನಡಪ್ರಭ ವಾರ್ತೆ ಮಂಡ್ಯ
ಹಾಲು, ವಿದ್ಯುತ್, ಮುದ್ರಾಂಕ ಶುಲ್ಕ, ಆಸ್ಪತ್ರೆ ಸೌಲಭ್ಯಗಳು, ಬಸ್ ದರ, ವೃತ್ತಿಪರ ತೆರಿಗೆ , ಮದ್ಯ ಬೆಲೆ ಸೇರಿದಂತೆ ಎಲ್ಲಾ ಬೆಲೆಗಳನ್ನು ಗನನಕ್ಕೇರಿಸಿದೆ. ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ಬಡವರ ಮೇಲೆ ಕನಿಕರವಿಲ್ಲ, ಜನರನ್ನು ಶೋಷಣೆ ಮಾಡುವುದನ್ನೇ ಗುರಿಯಾಗಿಸಿಕೊಂಡು ಯಾವುದೇ ಮಾನದಂಡಗಳನ್ನು ಅನುಸರಿಸದೆ ಮನಸೋಇಚ್ಛೆ ಬೆಲೆ ಏರಿಕೆ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸದರು.
ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಕರ್ನಾಟಕ ಜನರ ದಾರಿ ತಪ್ಪಿಸಿ ಕಾಂಗ್ರೆಸ್ ಸಚಿವರು, ಶಾಸಕರು ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಆಡಳಿತ ನಿಯಂತ್ರಣ ಕಳೆದುಕೊಂಡಿದೆ. ಲಕ್ಷಾಂತರ ಕೋಟಿ ಸಾಲದ ಹೊರೆಯನ್ನು ರಾಜ್ಯದ ಮೇಲೆ ಹಾಕಿದೆ. ಜನ ಹಿತವನ್ನು ಕಡೆಗಣಿಸಿ ಅಧಿಕಾರದ ಹಿತವನ್ನಷ್ಟೇ ಗುರಿಯಾಗಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಹಾಲಿನ ದರವನ್ನು ೯ ರು.ವರೆಗೆ ಏರಿಸಿದೆ. ೬೬೦ ಕೋಟಿ ರು. ಹಾಲಿನ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ. ಬಡವರ, ರೈತರು ಮತ್ತು ಮಹಿಳೆಯರ ಹಿತ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದೀಗ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಜನರನ್ನು ಸ್ಮಾರ್ಟ್ ಆಗಿ ಲೂಟಿ ಹೊಡೆಯುವುದಕ್ಕೆ ಮುಂದಾಗಿದೆ ಎಂದು ಟೀಕಿಸಿದರು.
ಬಿಎಂಟಿಸಿ ಬಸ್ ದರವನ್ನು ೩ ರಿಂದ ೫ ರು.ವರೆಗೆ, ಕೆಎಸ್‌ಆರ್‌ಟಿಸಿ ಬಸ್ ದರವನ್ನು ಶೇ.೧೫ರಷ್ಟು ಏರಿಸಲಾಗಿದೆ. ಮದ್ಯದ ಮೇಲೆ ೨೦೨೩ರಲ್ಲಿ ಶೇ.೨೦ರಷ್ಟು, ಬಿಯರ್ ಮೇಲೆ ಶೇ.೧೦ರಷ್ಟು ಅಬಕಾರಿ ಸುಂಕ ಹೆಚ್ಚಿಸಿದೆ. ವಿದ್ಯುತ್ ಸುಂಕವನ್ನು ಪ್ರತಿ ಯೂನಿಟ್‌ಗೆ ೭೦ ಪೈಸೆ ಹೆಚ್ಚಿಸಿದೆ. ೨೦೦ ಯೂನಿಟ್ ಮೀರಿದ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ೨.೮೯ ರು.ಹೆಚ್ಚಳ ಮಾಡಿ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.
ಸಾರ್ವಜನಿಕ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಶೇ.೪ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದೆ. ಕರ್ನಾಟಕ ಖರೀದಿ ಪಾರದರ್ಶಕತೆ ಕಾಯ್ದೆಗೆ ತಿದ್ದುಪಡಿ ಮಾಡುವುದು, ೨ ಕೋಟಿಯೊಳಗಿನ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ನಿರ್ದಿಷ್ಟ ಪ್ರಮಾಣದ ಮೀಸಲನ್ನು ಒದಗಿಸುವ ಮೂಲಕ ಅಲ್ಪಸಂಖ್ಯಾತರ ಪ್ರತಿನಿಧಿತ್ವವನ್ನು ಹೆಚ್ಚಿಸುವ ಉದ್ದೇಶವಿದೆ ಎಂದರು.
ಗೋಷ್ಠಿಯಲ್ಲಿ ವಸಂತಕುಮಾರ್, ವಿವೇಕ್, ಸಿ.ಟಿ.ಮಂಜುನಾಥ, ನಾಗಾನಂದ, ಬಿ.ಕೃಷ್ಣ ಇದ್ದರು.