ಹಾನಗಲ್ಲ ತಾಲೂಕಿನ 261 ಕೆರೆಗಳಿಗೆ ಮತ್ತೆ ಜೀವಕಳೆ!

KannadaprabhaNewsNetwork |  
Published : Aug 09, 2025, 12:01 AM IST
ವರದಾ ನದಿ ನೀರು ಕೆರೆ ಹರಿಯುತ್ತಿರುವುದು. | Kannada Prabha

ಸಾರಾಂಶ

ಬಾಳಂಬೀಡ ಹಾಗೂ ಹಿರೇಕಾಂಸಿ ನೀರಾವರಿ ಯೋಜನೆಗಳು ಕಳೆದ ಜೂನ್ ೨೦ರಿಂದಲೇ ನೀರು ಹರಿಸಲು ಆರಂಭಿಸಿವೆ. ಈ ಎರಡೂ ನೀರಾವರಿ ಯೋಜನೆಗಳಿಂದ ಒಟ್ಟು ೨೬೧ ಕೆರೆಗಳಿಗೆ ೧.೩೩ ಟಿಎಂಸಿ ನೀರು ತುಂಬಿಸಲಾಗುತ್ತದೆ.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ತಾಲೂಕಿನ ಕೃಷಿ ಕ್ಷೇತ್ರಕ್ಕೆ ವರದಾನವಾದ ಬಾಳಂಬೀಡ ಹಾಗೂ ಹಿರೇಕಾಂಸಿ ಏತ ನೀರಾವರಿಯಿಂದ ಪ್ರಸ್ತುತ ಕೃಷಿ ವರ್ಷದಲ್ಲಿ ೨೬೧ ನೀರಾವರಿ ಕೆರೆಗಳು ಬಹುತೇಕ ಭರ್ತಿಯಾಗಿದ್ದು, ರೈತ ಸಮುದಾಯದಲ್ಲಿ ಹರ್ಷ ಮೂಡಿಸಿದೆ.

ವರದಾ ನದಿಯಿಂದ ನೀರೊದಗಿಸುವ ಬಾಳಂಬೀಡ ಹಾಗೂ ಹಿರೇಕಾಂಸಿ ನೀರಾವರಿ ಯೋಜನೆಗಳು ಕಳೆದ ವರ್ಷವೇ ಉದ್ಘಾಟನೆಗೂ ಮುನ್ನವೇ ಪ್ರಾಯೋಗಿಕವಾಗಿ ಈ ಎಲ್ಲ ೨೬೧ ಕೆರೆಗಳಿಗೆ ನೀರು ತುಂಬಿಸಿದ್ದವು. ಇದರಿಂದ ತಾಲೂಕಿನ ಕೃಷಿ ಚಟುವಟಿಕೆ ಗರಿಗೆದರಿದ್ದವು.

ಇದೇ ನೀರಾವರಿ ಯೋಜನೆಗಳಿಗೆ ಅವಲಂಬಿತವಾಗಿ ತಾಲೂಕಿನಲ್ಲಿ ತೋಟಗಾರಿಕೆ, ಅದರಲ್ಲೂ ಅಡಕೆ ಬೆಳೆಗೆ ರೈತರು ಹೆಚ್ಚು ಪ್ರಾಧಾನ್ಯ ನೀಡಿದ್ದು, ಈಗ ತಾಲೂಕಿನಲ್ಲಿ ಅಡಕೆ ಬೆಳೆ ಕ್ಷೇತ್ರ ೧೧ ಸಾವಿರ ಹೆಕ್ಟೇರ್ ದಾಟಿದೆ. ಅಲ್ಲದೆ ಈ ಕೆರೆಗಳು ತುಂಬುತ್ತಿರುವುದರಿಂದ ಮತ್ತೆ ಹೆಚ್ಚು ನೀರಿನ ಅವಲಂಬನೆ ಇರುವ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ. ನೀರಿನ ಲಭ್ಯಯಿಂದ ಪ್ರಸ್ತುತ ವರ್ಷ ಭತ್ತದ ನಾಟಿ ಪ್ರಮಾಣ ಹೆಚ್ಚಾಗಿದೆ.ಬಾಳಂಬೀಡ ಹಾಗೂ ಹಿರೇಕಾಂಸಿ ನೀರಾವರಿ ಯೋಜನೆಗಳು ಕಳೆದ ಜೂನ್ ೨೦ರಿಂದಲೇ ನೀರು ಹರಿಸಲು ಆರಂಭಿಸಿವೆ. ಈ ಎರಡೂ ನೀರಾವರಿ ಯೋಜನೆಗಳಿಂದ ಒಟ್ಟು ೨೬೧ ಕೆರೆಗಳಿಗೆ ೧.೩೩ ಟಿಎಂಸಿ ನೀರು ತುಂಬಿಸಲಾಗುತ್ತದೆ. ಒಟ್ಟು ಕನಿಷ್ಠ ೯೦ ದಿನಗಳ ಕಾಲ ವರದಾ ನದಿಯಿಂದ ಕೆರೆಗಳಿಗೆ ನೀರು ಹರಿಸುವ ಯೋಜನೆ ರೈತರ ಪಾಲಿಗೆ ವರದಾನವಾಗಿದೆ. ಈ ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲವೂ ಹೆಚ್ಚಾಗಿ ಕಳೆದ ಬೇಸಿಗೆಯಲ್ಲಿ ಬಹುತೇಕ ಕೊರತೆಯಾಗದಂತೆ ಕೃಷಿ ಭೂಮಿಗೆ ನೀರು ದೊರೆಯಲಿದೆ.ಈಗಾಗಲೇ ಬಾಳಂಬೀಡ ಏತ ನೀರಾವರಿಯಿಂದ ತುಂಬಬೇಕಾದ ೧೮೩ ಕೆರೆಗಳಲ್ಲಿ ೧೩೦ಕ್ಕೂ ಅಧಿಕ ಕೆರೆಗಳು ಪೂರ್ಣವಾಗಿ ತುಂಬಿವೆ. ೨೯ ಕೆರೆಗಳು ಮುಕ್ಕಾಲು ಭಾಗ ತುಂಬಿವೆ. ಉಳಿದವು ಅರ್ಧಕ್ಕಿಂತ ಹೆಚ್ಚು ತುಂಬಿದ್ದು, ೧೫ ದಿನಗಳಲ್ಲಿ ಎಲ್ಲ ಕೆರೆಗಳು ತುಂಬುತ್ತವೆ ಎಂಬ ಮಾಹಿತಿ ಲಭ್ಯವಾಗಿದೆ.

ಬಾಳಂಬೀಡ ಏತ ನೀರಾವರಿ ಯೋಜನೆಯಲ್ಲಿ ಅಕ್ಕಿಆಲೂರು, ಹಾನಗಲ್ಲ, ಹಿರೇಕಾಂಸಿ, ಕರಗುದರಿ, ಬೆಳಗಾಲಪೇಟೆ, ಬೆಳವತ್ತಿ, ಎಳವಟ್ಟಿ, ಹುಲ್ಲತ್ತಿ, ಯಲಿವಾಳ ಕೆರೆಗಳು ಅತಿ ದೊಡ್ಡ ಕೆರೆಗಳಾಗಿವೆ.ಹಿರೇಕಾಂಸಿ ಏತ ನೀರಾವರಿ ಯೋಜನೆಯಲ್ಲಿ ೭೮ ಕೆರೆಗಳನ್ನು ತುಂಬಿಸುವ ಯೋಜನೆಯಾಗಿದ್ದು, ಈಗಾಗಲೇ ೭೦ ಕೆರೆಗಳು ತುಂಬಿವೆ. ಕೆಲವೇ ದಿನಗಳಲ್ಲಿ ಉಳಿದ ಕೆರೆಗಳು ತುಂಬಲಿವೆ. ಕೂಸನೂರು ಚಿಕ್ಕಾಂಸಿ ಹೊಸೂರು, ಮಕರವಳ್ಳಿ, ಮೂಡುರು, ಶಿರಗೋಡ ಕೆರೆಗಳು ಇಲ್ಲಿ ದೊಡ್ಡ ಕೆರೆಗಳಾಗಿವೆ.

ಪರಿಶ್ರಮಕ್ಕೆ ದೊರೆತ ಫಲ: ಬಾಳಂಬೀಡ ಹಾಗೂ ಹಿರೇಕಾಂಸಿ ಏತ ನೀರಾವರಿ ಯೋಜನೆಗಳು ನಮ್ಮ ಹೆಮ್ಮೆಯ ಯೋಜನೆಗಳು. ಹತ್ತಾರು ವರ್ಷಗಳ ಹೋರಾಟದ ಫಲವಾಗಿ ಮಾಜಿ ಸಚಿವ ಸಿ.ಎಂ. ಉದಾಸಿ ಅವರ ಪರಿಶ್ರಮಕ್ಕೆ ದೊರೆತ ಫಲ ಇದು. ಈ ಯೋಜನೆಗಳು ಆರಂಭದಿಂದ ರೈತರಲ್ಲಿ ಕೃಷಿ, ಅದರಲ್ಲೂ ತೋಟಗಾರಿಕೆಯ ವಿಶ್ವಾಸ ಮೂಡಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ರುದ್ರಪ್ಪ ಬಳಿಗಾರ ತಿಳಿಸಿದರು.

ಕೆರೆಗಳಿಗೆ ನೀರು: ಬಾಳಂಬೀಡ, ಹಿರೇಕಾಂಸಿ ಏತ ನೀರಾವರಿ ಯೋಜನೆಗಳೆಡರಿಂದಲೂ ಸಮರ್ಪಕವಾಗಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇನ್ನು ೧೫ ದಿನಗಳ ಒಳಗೆ ಎಲ್ಲ ಕೆರೆಗಳು ತುಂಬಲಿವೆ. ಕೆರೆಯಲ್ಲಿ ನೀರು ಕಡಿಮೆಯಾದರೆ ಕೂಡಲೆ ಕೆರೆ ತುಂಬಿಸುವ ಕಾರ್ಯ ನಡೆಯಲಿದೆ. ನದಿಯಲ್ಲಿ ನೀರು ಇರುವವರೆಗೂ ಕೆರೆಯಲ್ಲಿ ನೀರು ಕಡಿಮೆಯಾದಾಗೆಲ್ಲ ನೀರು ತುಂಬಿಸುತ್ತಲೆ ಇರುತ್ತೇವೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಎನ್. ತಿಳಿಸಿದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು