ಗೋಕರ್ಣ: ಧರ್ಮದ ತಕ್ಕಡಿ ಮೇಲಕ್ಕೆದ್ದಾಗ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ. ಜೀವನದ ಪ್ರತಿ ಹಂತದಲ್ಲಿ ಸಂತುಲನ ಅಗತ್ಯ. ಇದನ್ನು ಸಾಧಿಸಬೇಕೆನ್ನುವುದೇ ತುಲಾಭಾರದ ಸಂದೇಶ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಜೀವನವೆಂಬ ತಕ್ಕಡಿಯ ಸಂತುಲನದಲ್ಲಿ ಧರ್ಮ ಮಹತ್ ಪ್ರಮಾಣದಲ್ಲಿರಬೇಕು. ಉಳಿದೆಲ್ಲ ಪೂರಕವಾಗಿ ಸೇರಿಕೊಳ್ಳಬೇಕು. ವಿಷಯ ವಸ್ತುಗಳು ಭಾರದಿಂದ ಕೆಳಕ್ಕೆ ಬಂದು ಧರ್ಮ ಮೇಲಕ್ಕೇಳುವುದು ತುಲಾಭಾರದ ಸಂಕೇತ ಎಂದು ನುಡಿದರು.
ಮನೆಯಲ್ಲಿ ಲಕ್ಷ್ಮಿ ತುಂಬಿ ತುಳುಕಲಿ. ಮನಸ್ಸು, ಹೃದಯದಲ್ಲಿ ಶ್ರೀಮನ್ನಾರಾಯಣ ತುಂಬಲಿ. ಪ್ರತಿಯೊಬ್ಬರ ಬಾಳಿನಲ್ಲಿ ಸಮೃದ್ಧಿ ಮತ್ತು ಧಾರ್ಮಿಕತೆ ತುಂಬಲಿ ಎಂದು ಆಶಿಸಿದರು.ಶ್ರೀಮಠದ ಪಾರಂಪರಿಕ ಶಿಷ್ಯವರ್ಗಗಳಲ್ಲೊಂದಾದ ನಾಮಧಾರಿ ಸಮಾಜ ಮತ್ತು ಹರಿಕಾಂತ ಸಮಾಜದ ಗಣ್ಯರು ಸ್ವರ್ಣಪಾದುಕೆ ಸೇವೆ ನೆರವೇರಿಸಿದರು. ಯಲ್ಲಾಪುರ ದತ್ತಮಂದಿರದ ಆಡಳಿತ ಸಮಿತಿ ವತಿಯಿಂದ ಪಾದಪೂಜೆ ಸೇವೆ ನಡೆಯಿತು.
ಗೋಕರ್ಣದ ವರದೇಶ್ವರ ದೇವಾಲಯ ಶ್ರೀಮಠದ ಮೂಲದ ಮೂಲ. ಶ್ರೀಮಠ ಸ್ಥಾಪನೆಗೆ ಮೂಲವಾದದ್ದು ವರದೇಶ್ವರ ಸನ್ನಿಧಿ. ಶಂಕರರು- ವರದ ಮುನಿಗಳು ಸಮಾಗಮಗೊಂಡ ಈ ಕ್ಷೇತ್ರ ಇಂದು ಅವಗಣನೆಗೆ ಒಳಗಾಗಿದೆ. ಶ್ರೀಮಠದ ಮೂಲಚೈತನ್ಯ ಇಲ್ಲಿದೆ. ರಾಮಾದಿ ವಿಗ್ರಹಗಳು ಶಂಕರರ ಕೈಗೆ ಬಂದ ಬಳಿಕ ಇದರ ಪೂಜಾಕೈಂಕರ್ಯ ಮತ್ತು ಸಮಾಜೋದ್ಧಾರಕ್ಕಾಗಿ ಮಠ ಸ್ಥಾಪನೆ ಮಾಡುವ ನಿರ್ಧಾರ ಕೈಗೊಂಡ ಪುಣ್ಯಧಾಮ ಇದು ಎಂದು ಬಣ್ಣಿಸಿದರು. ಶ್ರೀಮಠದ ಶಿಷ್ಯಭಕ್ತರು ವರದೇಶ್ವರನ ಸೇವೆಯನ್ನು ಹೆಚ್ಚು ಮಾಡುವಂತಾಗಬೇಕು ಎಂದು ಆಶಿಸಿದರು. ವರದೇಶ್ವರ ದೇವಾಲಯದ ಪ್ರಾಚೀನ ಇತಿಹಾಸ ಮತ್ತು ಮಹತಿಯನ್ನು ದತ್ತಾತ್ರೇಯ ನಾರಾಯಣ ಹಿರೇಗಂಗೆ ಅನಾವರಣಗೊಳಿಸಿದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ತುಲಾಭಾರ ಸೇವೆಯ ನೇತೃತ್ವ ವಹಿಸಿದ್ದ ವಿ.ಡಿ. ಭಟ್, ಮೂರೂರು ರಾಜಾರಾಂ ಭಟ್ಟ, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಹೊಸಾಕುಳಿ, ಕುಮಟಾ ಮಂಡಲದ ಅಧ್ಯಕ್ಷ ಸುಬ್ರಾಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.