ಕುಷ್ಟಗಿ:
ಜೀವನ ಪಾವನಗೊಳಿಸಲು ಬಸವಣ್ಣನವರ ವಚನ ಸಾಹಿತ್ಯ ಅಳವಡಿಸಿಕೊಳ್ಳುವುದು ಸೂಕ್ತ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.ಪಟ್ಟಣದ ಶ್ರೀಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕಾಡಳಿತ, ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾ ಮತ್ತು ಬಸವ ಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ 892ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಸವೇಶ್ವರರ ವಚನ ಅರಿತುಕೊಂಡು ಉತ್ತಮ ಜೀವನ ಸಾಗಿಸಬೇಕು. ತಂದೆ-ತಾಯಿಗಳು ಮಕ್ಕಳಿಗೆ ಕನಿಷ್ಠ ಹತ್ತು ವಚನಗಳನ್ನಾದರೂ ಕಲಿಸಬೇಕು. ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು ಅವರ ಆಚಾರ-ವಿಚಾರ ಬೆಳೆಸಬೇಕಿದೆ ಎಂದು ಹೇಳಿದರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬಸವೇಶ್ವರರು 12ನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣದ ಕನಸು ಕಂಡಿದ್ದರು. ಅವರ ಚಿಂತನೆ, ತತ್ವಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಬಸವ ಧರ್ಮದ ಪ್ರಚಾರಕ್ಕೆ ಸರ್ಕಾರ ಅನೇಕ ಯೋಜನೆ ಹಾಕಿಕೊಳ್ಳುತ್ತಿದೆ. ಆದರೆ, ಅವರ ತತ್ವಾದರ್ಶ ಅಳವಡಿಸಿಕೊಳ್ಳುವ ಕಾರ್ಯವು ಆಗದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದ ಅವರು, ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಿರುವ ಸಮಿತಿ ಮುಂದಿನ ದಿನಗಳಲ್ಲಿ ಎಲ್ಲ ಜಾತಿ, ಸಮುದಾಯದವನ್ನು ಒಗ್ಗೂಡಿಸಿಕೊಂಡು ಅರ್ಥಪೂರ್ಣವಾದ ಜಯಂತಿ ಆಚರಿಸುವಂತೆ ಕರೆ ನೀಡಿದರು.
ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಮಾತನಾಡಿ, ಬಸವಣ್ಣನ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿದರು, ಪ್ರಾಚಾರ್ಯ ಡಾ. ಎಸ್.ವಿ. ಡಾಣಿ ಉಪನ್ಯಾಸ ನೀಡಿದರು. ಈ ವೇಳೆ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಪ್ರವಚನಕಾರ ಬಸವಕಿರಣ ಶರಣರು, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ ಬಸವರಾಜ, ವೀರಶೈವ ಲಿಂಗಾಯತ ಮಹಾಸಭಾಧ್ಯಕ್ಷ ಉಮಾಪತಿ ಅಕ್ಕಿ, ದೇವೇಂದ್ರಪ್ಪ ಬಳೂಟಗಿ, ತಾಪಂ ಇಒ ಪಂಪಾಪತಿ ಹಿರೇಮಠ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲ್ಲಭಾವಿ, ರಾಜೇಶ ಪತ್ತಾರ, ಶೇಖರಗೌಡ ಮಾಲಿಪಾಟೀಲ, ಮಹೇಶ ಹಡಪದ, ಸಂಗನಗೌಡ ಪಾಟೀಲ, ಬಸವರಾಜ ಕುದರಿಮೋತಿ, ಮಲ್ಲನಗೌಡ ಅಗಸಿಮುಂದಿನ ಸೇರಿದಂತೆ ಅನೇಕರು ಇದ್ದರು. ಇದಕ್ಕೂ ಮೊದಲು ಬಸವೇಶ್ವರರ ಭಾವಚಿತ್ರ ಹಾಗೂ ವಚನಕಟ್ಟನ್ನು ತಹಸೀಲ್ದಾರ್ ಕಾರ್ಯಾಲಯದಿಂದ ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದ ವರೆಗೆ ಅದ್ಧೂರಿಯಾಗಿ ವಾದ್ಯಮೇಳಗಳೊಂದಿಗೆ ಮೆರವಣಿಗೆ ನಡೆಯಿತು.