ಗೋಕರ್ಣ: ಕಾಲನ ಭಾಷೆಯನ್ನು ಅರ್ಥ ಮಾಡಿಕೊಂಡರೆ ಸೃಷ್ಟಿಯ ರಹಸ್ಯವನ್ನು ಭೇದಿಸಬಹುದು. ಕಾಲಜ್ಞಾನವನ್ನು ತಿಳಿದುಕೊಂಡರೆ ಜೀವನಕ್ಕೆ ಅನುಕೂಲವಾಗುತ್ತದೆ. ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎನ್ನುವುದನ್ನು ನಮ್ಮ ಪರಂಪರೆ ತಿಳಿಸಿಕೊಟ್ಟಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅನಾವರಣ ಚಾತುರ್ಮಾಸ್ಯದ ಆರನೇ ದಿನ ಕಾಲ ಪ್ರವಚನ ಸರಣಿಯನ್ನು ಮುಂದುವರಿಸಿದ ಶ್ರೀಗಳು, ಕಾಲನನ್ನು ಮೀರಿ ಹೋಗುವವರು ಇದ್ದಾರೆ. ಅಂತೆಯೇ ಕಾಲದ ವಶವಾಗುವವರೂ ಇರುತ್ತಾರೆ. ಸೂಕ್ಷ್ಮಮತಿಗಳಾದರೆ ಒಬ್ಬನ ದೇಹವನ್ನು ನೋಡಿ ಆತನ ಜಾತಕ ಅಥವಾ ಜೀವನವನ್ನು ತಿಳಿಯಬಹುದು. ಗ್ರಹಸ್ಥಿತಿಗಳನ್ನು ಇಟ್ಟುಕೊಂಡು ಕಾಲನ ನಡೆಯನ್ನು ವಾಕ್ಯವಾಗಿ ಪರಿವರ್ತಿಸಬಹುದು ಎಂದರು.ಕಾಲ ನಮ್ಮೊಂದಿಗೆ ಮಾತನಾಡುತ್ತದೆ. ಅನುದಿನ, ಅನುಕ್ಷಣವೂ ಕಾಲ ನಮ್ಮೊಂದಿಗೆ ನಿರಂತರ ಸಂವಾದ ನಡೆಸುತ್ತಿರುತ್ತದೆ. ಆದರೆ ಅದರ ಭಾಷೆ ನಮಗೆ ಅರ್ಥವಾಗುತ್ತಿಲ್ಲ. ಅದನ್ನು ಅರ್ಥ ಮಾಡಿಕೊಂಡರೆ ನಮಗೆ ಜೀವನದಲ್ಲಿ ಎಲ್ಲವನ್ನೂ ಕಾಲ ನೀಡುತ್ತದೆ. ಕಾಲನ ಭಾಷೆ ಕಣ್ಣಿಗೆ ಕಾಣುವಂಥದ್ದು; ಮನಸ್ಸಿಗೆ ನಿಲುಕುವಂಥದ್ದು. ಜನಸಾಮಾನ್ಯರೂ ಅರ್ಥ ಮಾಡಿಕೊಳ್ಳುತ್ತದೆ. ಹನ್ನೆರಡು ರಾಶಿ, ಒಂಬತ್ತು ಗ್ರಹ, ಇಪ್ಪತ್ತೇಳು ನಕ್ಷತ್ರಗಳು, ಭೂಮಿ- ಆಕಾಶಗಳ ಮೂಲಕ ಕಾಲ ಮಾತನಾಡುತ್ತಿರುತ್ತದೆ ಎಂದರು.ಕಾಲಜ್ಞಾನ ಅತ್ಯಂತ ನಿಖರ; ಕಾಲನ ಭಾಷೆಯನ್ನು ಶಕುನ ಶಾಸ್ತ್ರದ ಮೂಲಕವೂ ತಿಳಿದುಕೊಳ್ಳಬಹುದು. ಕಾಲದ ಭಾಷೆ ಅರ್ಥ ಮಾಡಿಕೊಳ್ಳುವ ಸಲುವಾಗಿ ಹುಟ್ಟಿದ್ದೇ ಜ್ಯೋತಿಷ್ಯ ಶಾಸ್ತ್ರ. ಇದನ್ನು ತಿಳಿದುಕೊಂಡರೆ ಬದುಕು ಸುಲಲಿತವಾಗುತ್ತದೆ ಎಂದರು.
ರಾಮಚಂದ್ರಾಪುರ ಮಂಡಲದ ಹೊಸನಗರ, ಸಂಪೇಕಟ್ಟೆ, ತುಮರಿ, ಹೊಸಕೊಪ್ಪ ಮತ್ತು ನಿಟ್ಟೂರು ವಲಯಗಳ ಶಿಷ್ಯಭಕ್ತರು ಶುಕ್ರವಾರದ ಭಿಕ್ಷಾಸೇವೆ ನೆರವೇರಿಸಿದರು. ವಿಜಯಲಕ್ಷ್ಮಿ, ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಮಹಾಮಂಡಲದ ಪದಾಧಿಕಾರಿಗಳಾದ ಹೇರಂಭ ಶಾಸ್ತ್ರಿ, ಈಶ್ವರ ಪ್ರಸಾದ್ ಕನ್ಯಾನ, ಕೇಶವ ಪ್ರಕಾಶ್ ಎಂ., ಪ್ರಸನ್ನ ಉಡುಚೆ, ಉಪಾಧ್ಯಕ್ಷ ಹಾರೇಬೈಲ್ ವೆಂಕಟೇಶ್, ಕಾರ್ಯದರ್ಶಿ ರುಕ್ಮಾವತಿ ಸಾಗರ, ರಾಮಚಂದ್ರಾಪುರ ಮಂಡಲದ ಅಧ್ಯಕ್ಷರಾದ ಪ್ರಕಾಶ್ ಬೇರಾಳ, ಮೋಹನ ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು.