ಅರಿತು ನಡೆದರೆ ಬದುಕು ಸಾರ್ಥಕ: ಶಿವಾನಂದ ಸ್ವಾಮೀಜಿ

KannadaprabhaNewsNetwork |  
Published : Jan 17, 2025, 12:46 AM IST
16ಕೆಪಿಎಲ್25:ಕೊಪ್ಪಳ ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಗುರುವಾರ ಜರುಗಿದ ಭಕ್ತ ಹಿತ ಚಿಂತನಾ ಸಭೆಯಲ್ಲಿ ಭಾಗಿಯಾಗಿದ್ದ ಅಪಾರ ಜನ. | Kannada Prabha

ಸಾರಾಂಶ

ಹಾಳು ಆಗಿರುವ ಹಲವಾರು ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಅರಿತು ನಡೆದರೆ ಬದುಕು ಸಾರ್ಥಕ.

ಭಕ್ತ ಹಿತ ಚಿಂತನಾ ಸಭೆ । ದಾವಣಗೆರೆಯ ಶ್ರೀ ಜಡೆಸಿದ್ದ ಶಿವಯೋಗಿಶ್ವರ ಮಠದ ಶ್ರೀಕನ್ನಡಪ್ರಭ ವಾರ್ತೆ ಕೊಪ್ಪಳ

ಹಾಳು ಆಗಿರುವ ಹಲವಾರು ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಅರಿತು ನಡೆದರೆ ಬದುಕು ಸಾರ್ಥಕ ಎಂದು

ದಾವಣಗೆರೆಯ ಶ್ರೀ ಜಡೆಸಿದ್ದ ಶಿವಯೋಗಿಶ್ವರ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಭಕ್ತ ಹಿತ ಚಿಂತನಾ ಸಭೆಯಲ್ಲಿ ಉಪದೇಶಾಮೃತ ನೀಡಿದ ಅವರು, ಇಂಥ ಸಭೆಯಲ್ಲಿ ಮಾತನಾಡುವ ಭಾಗ್ಯ ಸಿಕ್ಕಿರುವುದೇ ನಮಗೆ ಪುಣ್ಯ. ನಿಮ್ಮ ಸಹನೆ, ಶಾಂತಿ ನೋಡಿ ಆನಂದವಾಗಿದೆ. ಭಗವಂತ ನೂರು ವರ್ಷ ನಮಗೆ ನೀಡಿದ್ದಾನೆ. ಇದರ ಜೊತೆಗೆ ನೂರೆಂಟು ಸಂಕಟ ನೀಡಿದ್ದಾನೆ. ಯಾರು ಇಲ್ಲಿ ಚಿರಂಜೀವಿಗಳಲ್ಲ. ಹೀಗಾಗಿ ಇರುವುದರೊಳಗಾಗಿ ನಾವು ಸಾರ್ಥಕ ಬದುಕು ಸಾಗಿಸಬೇಕು ಎಂದರು.

ಸಾರ್ಥಕ ಜೀವನ ನಡೆಸಿದರೆ ಜೀವನ ಮೋಕ್ಷ ಸಿಗುತ್ತದೆ. ಇಲ್ಲದಿದ್ದರೂ ಉತ್ತಮ ಜನ್ಮ ಸಿಗಬಹುದು. ಸಂಸಾರದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳಬೇಡಿ. ಅದೇ ಚಿಂತೆಯಲ್ಲಿ ಇದ್ದರೆ ಸುವಿಚಾರ ನಿಮ್ಮಲ್ಲಿ ಬೆಳೆಯುವುದಿಲ್ಲ.

ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನೀನು ಬರುವಾಗ ಒಬ್ಬನೇ ಬಂದಿ, ಒಬ್ಬನೇ ಹೋಗ್ತಿ. ಹೀಗಾಗಿ ಇನ್ನೊಬ್ಬರ ಕುರಿತು ತಲೆ ಕೆಡಿಸಿಕೊಳ್ಳಬೇಡ. ನಿನ್ನ ಹಾದಿಯಲ್ಲಿ ನಡೆ, ಸಾಧಿಸು, ಅಂದಾಗ ಸಾರ್ಥಕತೆ ಉಂಟಾಗುತ್ತದೆ ಎಂದರು.

ಸಂಸಾರದಲ್ಲಿಯೇ ಮುಳಿಗಿದರೆ ನೀನು ನಿನ್ನನ್ನು ಅರಿಯಲು ಸಾಧ್ಯವಿಲ್ಲ. ಹಾಂಗಂತ ಅದನ್ನು ತ್ಯಜಿಸಿಬಿಡಬೇಕು ಅಂತಲ್ಲ. ತಲೆಕೆಡಿಸಿಕೊಳ್ಳಬೇಡ. ಯಾರಾದರೂ ಏನಾನು ಅನ್ನುಕೊಳ್ಳಲಿ, ನೀನು ನೀನಾಗಿಯೇ ಇರು.

ಸಂಸಾರದಲ್ಲಿ ಇದ್ದು ಇಲ್ಲದಂತೆ ಇರಬೇಕು. ನೀರಿನ ಮೇಲೆ ದೋಣಿ ಸಾಗಿದಂತೆ ಸಾಗಬೇಕು. ನಿನ್ನ ಜೀವನ ವ್ಯರ್ಥ ಮಾಡಿಕೊಳ್ಳಬೇಡ ಎಂದರು.

ಫಾರೆಸ್ಟ್ ಮ್ಯಾನ್‌ ಆಫ್‌ ಇಂಡಿಯಾ ಖ್ಯಾತಿಯ ಪದ್ಮಶ್ರೀ ಜಾದವ್ ಪಾಯೆಂಗ್‌ ಭಾಗವಹಿಸಿದ್ದರು.

ಸಾನಿಧ್ಯವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಗುರು ಬಸವ ಪಟ್ಟದೇವರು ಹಾಗೂ ಒಳ ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಬಸವಲಿಂಗ ಸ್ವಾಮೀಜಿ ಹಾಗೂ ಮಂಗಳೂರಿನ ಅರಳಲೇ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.

ವಿಶೇಷ ಸಾಧಕರಾದ ರಮೇಶ ಬಲ್ಲಿದ, ಮಲ್ಲಪ್ಪ ನಿಂಗಪ್ಪ ಉದ್ದಾರ ಅವರನ್ನು ಸನ್ಮಾನಿಸಲಾಯಿತು.

ಗುಡ್ಡದ ತುಂಬೆಲ್ಲ ಜನಸ್ತೋಮ:

ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಭಕ್ತ ಹಿತ ಚಿಂತನಾ ಸಭೆಯಲ್ಲಿ ಅಪಾರ ಜನಸ್ತೋಮ ಭಾಗವಹಿಸಿತ್ತು. ಗುಡ್ಡದ ಮೇಲೆ ಜನರು ಗುಡ್ಡವೇ ಕಾಣದಂತೆ ಕುಳಿತಿದ್ದರು.

ಮನರಂಜಿಸಿದ ಸಂಗೀತ ಕಾರ್ಯಕ್ರಮ:

ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಪಂಡಿತ್‌ ಡಾ. ಮೈಸೂರು ಮಂಜುನಾಥ್ ಇವರಿಂದ ವಾಯಲಿನ್, ಮುಂಬೈನ ಪಂಡಿತ್‌ ರೂಪ ಕುಲಕರ್ಣಿ ಅವರಿಂದ ಬಾನ್ಸೂರಿ, ಧಾರವಾಡದ ಪಂಡಿತ್‌ ಕೈವಲ್ಯಕುಮಾರ್‌ ಗುರವ್‌ ಇವರಿಂದ ಗಾಯನ, ಬೆಂಗಳೂರಿನ ಪಂಡಿತ್‌ ಗಿರಿಧರ ಉಡುಪ ಇವರಿಂದ ಘಟಂ, ಮುಂಬೈನ ಪಂಡಿತ್ ಮುಕುಂದ ರಾಜ್‌ದೇವು ಇವರಿಂದ ತಬಲ ಕಾರ್ಯಕ್ರಮ ಜರುಗಿತು. ಮಹನೀಯರ ಸಂಗೀತದಿಂದ ನೆರದಿದ್ದವರು ಅವರ ಸಂಗೀತ ಕಲೆಗೆ ತಲೆದೂಗಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ